ಬಳ್ಳಾರಿ: ರೈತರಿಂದ ಕಬ್ಬು ಖರೀದಿಸಲು ನಿರಾಕರಿಸುತ್ತಿರುವ ಸಿರುಗುಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಸ್ತಿಯನ್ನು ಮಾರಾಟ ಮಾಡಿಯಾದರೂ ರೈತರ ನಷ್ಟವನ್ನು ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕಬ್ಬು ಬೆಳೆಗಾರರು, ರೈತರೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಕಬ್ಬು ಕಟಾವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಿರಗುಪ್ಪದ ದೇಶನೂರು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ಕಬ್ಬು ನುರಿಸುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದೀಗ ಏಕಾಏಕಿ ಕಬ್ಬು ಖರೀದಿಸಲು ನಿರಾಕರಿಸುತ್ತಿದ್ದು, ನಷ್ಟ ನೆಪವೊಡ್ಡಿ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನು ಮೈಲಾರ ಶುಗರ್ ಲಿಮಿಟೆಡ್ ಕಾರ್ಖಾನೆ, ಯಾದಗಿರಿ, ದಾವಣಗೆರೆ ಮತ್ತು ಮುಂಡರಗಿ ಸಕ್ಕರೆ ಕಾರ್ಖಾನೆಗಳು ಖರೀದಿಸಲು ಮುಂದೆ ಬಂದಿದ್ದು, ಆ ಕಾರ್ಖಾನೆಗಳೊಂದಿಗೆ ಲಿಖೀತವಾಗಿ ರೈತ ಮುಖಂಡರ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡು ಅಫಿಡವಿಟ್ ಪಡೆಯಲಾಗುವುದು. ರೈತರಿಗೆ ಉತ್ತಮವಾಗುವಂತ ದರ ಹಾಗೂ ಪ್ರಯತ್ನಗಳನ್ನು ಜಿಲ್ಲಾಡಳಿತ ಮಾಡಿಕೊಡಲಿದೆ. ಈ ಕಾರ್ಖಾನೆಗಳೊಂದಿಗೆದರ, ಇನ್ನಿತರೆ ವಿಷಯಗಳ ಕುರಿತಂತೆ ಚರ್ಚಿಸಿ ಒಮ್ಮತದ ಮತ್ತು ರೈತರ ಹಿತದೃಷ್ಟಿಯಿಂದ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಭೆಗೆ ದೇಶನೂರು ಸಕ್ಕರೆ ಕಾರ್ಖಾನೆ ಮಾಲೀಕರು ಬರದಿದ್ದರೇನಂತೆ ಅವರ ಕಾರ್ಖಾನೆ ಆಸ್ತಿ ಇದ್ದು, ಅದನ್ನು ಮಾರಾಟ ಮಾಡಿ ತಮ್ಮ ನಷ್ಟ ಭರಿಸಿಕೊಡಲಾಗುವುದು. ಕಬ್ಬು ನುರಿಸುವಿಕೆ, ದರ ನಿಗದಿ, ಟ್ರಾನ್ಸ್‌ಪೊರ್ಟ್ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ರೈತರು ತಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಕಾರ್ಖಾನೆಗಳ ಮಾಲೀಕರೊಂದಿಗೆ ಚರ್ಚಿಸಿ ಉತ್ತಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗೆ ಸಂಬಂಧಿಸಿದ ವಿವಿಧ ವಿಷಯಗಳ ರೈತರು, ಕಬ್ಬು ಬೆಳೆಗಾರರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಮಾಜಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ, ಎಸ್ಪಿ ಅರುಣ ರಂಗರಾಜನ್ ಸೇರಿದಂತೆ ಅಧಿಕಾರಿಗಳು ಮತ್ತು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.