Advertisement

ಸಾಲ ಮನ್ನಾ ಹಣ ಪಾವತಿ: ಸುಳ್ಳು ಮಾಹಿತಿ

09:51 PM Dec 20, 2019 | mahesh |

ಸುಳ್ಯ: ಸಾಲಮನ್ನಾ ಫಲಾನುಭವಿಗಳಿಗೆ ನ. 30ರೊಳಗೆ ಹಣ ಬಿಡುಗಡೆ ಪಾವತಿ ಆಗುತ್ತದೆ ಎಂದು ಈ ಹಿಂದಿನ ಸಭೆಯಲ್ಲಿ ಸಹಕಾರ ಇಲಾಖೆ ಅಧಿಕಾರಿ ನೀಡಿರುವ ಮಾಹಿತಿ ಸುಳ್ಳಾಗಿದ್ದು, ಆ ಅಧಿಕಾರಿಯ ಬರುವಿಕೆಗಾಗಿ ಕಾದು ಕೊನೆಗೂ ಬಾರದ ಕಾರಣ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನಿರ್ಣಯ ಅಂಗೀಕರಿಸಿದ ವಿದ್ಯಮಾನ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ವಿಷಯ ಪ್ರಸ್ತಾವಿಸಿದ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಕಳೆದ ಸಭೆಯಲ್ಲಿ ಸಹಕಾರ ಇಲಾಖೆಯ ಪ್ರಭಾರ ಎ.ಆರ್‌. ಅವರು ತಪ್ಪು ಮಾಹಿತಿ ನೀಡಿದ್ದಾರೆ. ನ. 30ರೊಳಗೆ ಸಾಲಮನ್ನಾ ಹಣ ಜಮೆ ಆಗುತ್ತದೆ ಎಂದು ಹೇಳಿದ್ದರೂ ಈ ತನಕ ಬಂದಿಲ್ಲ. ಸದನದ ದಿಕ್ಕು ತಪ್ಪಿಸಿರುವ ಅಧಿಕಾರಿ ಸಭೆಗೆ ತತ್‌ಕ್ಷಣ ಬರುವಂತೆ ಆಗ್ರಹಿಸಿದರು.

ಇದಕ್ಕೆ ಸದಸ್ಯರಾದ ಅಶೋಕ್‌ ನೆಕ್ರಾಜೆ, ಅಬ್ದುಲ್‌ ಗಫೂರ್‌ ಧ್ವನಿಗೂಡಿಸಿ, ಉಳಿತಾಯ ಖಾತೆ ಸರಿಪಡಿಸಿದ ಫಲಾನುಭವಿಗಳಿಗೂ ಹಣ ಬಂದಿಲ್ಲ ಎಂದರು. ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ ಮಾತನಾಡಿ, ಚುನಾವಣೆ ಕಾರಣ ನೀಡ್ಡಿ ಅಧಿಕಾರಿ ಸಭೆಗೆ ಗೈರು ಆಗುವುದು ಸರಿಯಲ್ಲ. ಸಭೆಗೆ ಬರಲಿ ಎಂದರು.

ಕಾದು ಕಾದು ಸುಸ್ತಾದರು
ಬಳಿಕ ತಾ.ಪಂ. ಅಧ್ಯಕ್ಷ ಹಾಗೂ ಇಒ ಅವರನ್ನು ಸಹಕಾರ ಇಲಾಖೆಯ ಎ.ಆರ್‌. ಅವರನ್ನು ಸಂಪರ್ಕಿಸಿ ಸಭೆಗೆ ಬರುವಂತೆ ಸೂಚಿಸಿದರು. ಅವರು ಚುನಾವಣೆ ಕರ್ತವ್ಯದಲ್ಲಿರುವ ಕಾರಣ ಕಚೇರಿಯ ಬೇರೆ ಅಧಿಕಾರಿಯನ್ನು ಕಳುಹಿಸುವುದಾಗಿ ತಿಳಿಸಿದರು. ಮಧ್ಯಾಹ್ನವಾದರೂ ಅಧಿಕಾರಿ ಬರಲಿಲ್ಲ. ಕೊನೆಗೆ ಮಧ್ಯಾಹ್ನ ಅನಂತರ ಸಭೆ ಮುಂದುವರಿದು ಸಂಜೆಯಾದರೂ ಬರುವೆನೆಂದ ಅಧಿಕಾರಿ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಕೊನೆಗೆ ಸದಸ್ಯರ ಆಗ್ರಹದಂತೆ ಸಹಕಾರ ಇಲಾಖೆಯ ಎಆರ್‌ ಮತ್ತು ಡಿಆರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

245 ಮಂದಿಗೆ ವಸತಿ ಸಹಾಯಧನ ಬಂದಿಲ್ಲ
ವಿವಿಧ ವಸತಿ ಯೋಜನೆಗಳ ಅಡಿ ತಾಲೂಕಿನ 245 ಫಲಾನುಭವಿಗಳಿಗೆ ಸಹಾಯಧನ ಹಣ ಬಿಡುಗಡೆಗೆ ಬಾಕಿ ಇರುವ ಅಂಶ ತಾ.ಪಂ. ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂತು. ಸದಸ್ಯ ಅಬ್ದುಲ್‌ ಗಫ‌ೂರ್‌ ವಿಷಯ ಪ್ರಸ್ತಾವಿಸಿ, 2018-19ರ ಸಾಲಿನಲ್ಲಿ ವಸತಿ ಯೋಜನೆಯಡಿ ಗ್ರಾ.ಪಂ.ಗೆ ತಲಾ 20ರಂತೆ ಮನೆ ಮಂಜೂರಾಗಿತ್ತು. ಅರ್ಹ ಫಲಾನುಭವಿಗಳು ಅದನ್ನು ನಂಬಿ ಹಳೆ ಮನೆ ಕೆಡವಿದ್ದರು. ಆದರೆ ಆ ಯೋಜನೆ ಸ್ಥಗಿತಗೊಂಡಿತ್ತು. ಇದನ್ನು ಕೈಬಿಟ್ಟ ಬಗ್ಗೆ ಸರಕಾರದ ಆದೇಶ ಎಲ್ಲೂ ಸಿಗುತ್ತಿಲ್ಲ. ಈಗಾಗಲೇ ಬೇರೆ ಬೇರೆ ಯೋಜನೆಯಡಿ ಮನೆ ನಿರ್ಮಿಸಿದ ಫಲಾನುಭವಿಗಳಿಗೆ ಒಂದು ವರ್ಷ ಕಳೆದರೂ ಸಹಾಯಧನ ಬಂದಿಲ್ಲ ಎಂದು ಗಮನ ಸೆಳೆದರು.

Advertisement

ತತ್‌ಕ್ಷಣ ಹಣ ಬಿಡುಗಡೆ
ಪ್ರತಿಕ್ರಿಯಿಸಿದ ಇಒ ಭವಾನಿಶಂಕರ, ಹಣ ಬಿಡುಗಡೆಗೆ ಬಾಕಿ ಇರುವ ಫಲಾನುಭವಿಗಳಿಗೆ ಶೀಘ್ರ ಮೊತ್ತ ಬಿಡುಗಡೆಗೊಳಿಸುವ ಬಗ್ಗೆ ಸರಕಾರ ಸಭೆ ನಡೆಸಿ ಜಿಲ್ಲಾಡಳಿತದ ಮೂಲಕ ಮಾಹಿತಿ ನೀಡಿದೆ. ಗ್ರಾ.ಪಂ. ವ್ಯಾಪ್ತಿಗೆ ನೀಡಿದ ವಸತಿ ಮಂಜೂರಾತಿ ಪ್ರಕಾರ ನಾವು ಫಲಾನುಭವಿಗಳ ಪಟ್ಟಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಿದ್ದೆವು. ಆದರೆ ಚುನಾವಣೆ ಬಳಿಕ ಅದು ಮತ್ತೆ ತೆರೆದಿಲ್ಲ. ಹೊಸ ಮನೆಗಿಂತ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ವಸತಿ ನಿಗಮವು ಬಾಕಿ ಇರುವ ಮೊತ್ತ ಪಾವತಿಸಲು ಮೊದಲ ಆದ್ಯತೆ ನೀಡಿದೆ ಎಂದರು. ಜಿ.ಪಂ.ಸದಸ್ಯ ಆಶಾ ತಿಮ್ಮಪ್ಪ ಧ್ವನಿಗೂಡಿಸಿ, ವಸತಿ ನಿರ್ಮಾಣಕ್ಕೆ ಸಂಬಂಧಿಸಿ ಸರಕಾರ ತತ್‌ಕ್ಷಣ ಹಣ ಬಿಡುಗಡೆ ಮಾಡಲಿದೆ ಎಂದರು.

ಎಣ್ಮೂರು ಗ್ರಾ.ಪಂ.ಅನ್ನು ಸಮೀಪದ ಗ್ರಾ.ಪಂ.ಗೆ ವಿಲೀನಗೊಳಿಸುವುದಕ್ಕೆ ಗ್ರಾಮ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾವವಾಯಿತು. ಗ್ರಾ.ಪಂ. ಚುನಾವಣೆ ಸನಿಹದಲ್ಲಿದೆ. ನೋಟಿಫಿಕೇಶ್‌ ಆದ ಅನಂತರ ಕೋರ್ಟ್‌ ಮೆಟ್ಟಲೇರಿದರೂ ಪ್ರಯೋಜನವಾಗದು. ಅದಕ್ಕೆ ಮೊದಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಬ್ದುಲ್‌ ಗಫೂರ್‌ ಸಲಹೆ ನೀಡಿದರು.

ವಿದ್ಯುತ್‌ ಮಾರ್ಗ ಬದಲಾಯಿಸಿ
ಕಲ್ಮಕಾರು ಗ್ರಾಮದ ಗೂನಡ್ಕ- ಶಕ್ತಿನಗರದಲ್ಲಿ ರಬ್ಬರ್‌ ತೋಟದ ನಡುವೆ ವಿದ್ಯುತ್‌ ಮಾರ್ಗ ಇದೆ. ಇದರಿಂದ ಪ್ರತಿ ವರ್ಷ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಈ ಹಿಂದೆ ಈ ಲೈನ್‌ ಬದಲಾವಣೆಗೆ ಮುಂದಾಗಿ ವಿದ್ಯುತ್‌ ಕಂಬ ತರಲಾಗಿತ್ತು. ಅದು ಅರ್ಧದಲ್ಲೇ ಬಾಕಿ ಆಗಿದೆ ಎಂದು ಸದಸ್ಯ ಉದಯ ಕೊಪ್ಪಡ್ಕ ಗಮನ ಸೆಳೆದರು. ಲೈನ್‌ ಬದಲಾವಣೆಗೆ ಮೆಸ್ಕಾಂನಲ್ಲಿ ಅನುದಾನ ಇಲ್ಲ ಎಂದು ಅಧಿಕಾರಿ ಉತ್ತರಕ್ಕೆ ತಾ.ಪಂ.ಅದ್ಯಕ್ಷ ಚನಿಯ ಕಲ್ತಡ್ಕ, ಸದಸ್ಯ ರಾಧಾಕೃಷ್ಣ ಬೊಳ್ಳೂರು ಆಕ್ಷೇಪಿಸಿದರು. ವಾರದೊಳಗೆ ತೆರವು ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ಪರಿಶೀಲಿಸಿ ಕ್ರಮ ಕೈಗೊಳ್ಳಿ
ಸುಬ್ರಹ್ಮಣ್ಯ ಹಿ.ಪ್ರಾ. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಖಾತೆ ಹೊಂದಿರುವ ವಿಚಾರ ಮತ್ತು ಎಸ್‌ಡಿಎಂಸಿ ಸಮಿತಿ ರಚನೆ ಕ್ರಮಬದ್ಧವಾಗಿಲ್ಲ ಎಂಬ ಚರ್ಚೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಪಿ. ಮಹಾದೇವ, ತಾ.ಪಂ. ಅಧ್ಯಕ್ಷರೊಂದಿಗೆ ತಾನು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಿರಿಯ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಖಾತೆ ಇರುವುದು ನಿಜ. ಅದರ ದಾಖಲೆ ಸುಬ್ರಹ್ಮಣ್ಯ ಗ್ರಾ.ಪಂ.ಉಪಾಧ್ಯಕ್ಷರಲ್ಲಿದೆ. ಅದರಲ್ಲಿದ್ದ ಹಣವನ್ನು ಶಾಲೆಯ ಖಾತೆಗೆ ಹಾಕಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ತಾ.ಪಂ. ವತಿಯಿಂದ ಸೂಚನೆ ನೀಡುವಂತೆ ಹೇಳಿದರು. ಹೆತ್ತವರಿಲ್ಲದೆ ಎಸ್‌ಡಿಎಂಸಿ ರಚಿಸಿರುವ ಮತ್ತು ಖಾತೆ ನಿರ್ವಹಣೆ ಬಗೆಗಿನ ಆಶೋಕ್‌ ನೆಕ್ರಾಜೆ ಪ್ರಶ್ನೆಗೆ ಉತ್ತರಿಸಿದ ತಾ.ಪಂ. ಅಧ್ಯಕ್ಷರು, ಎಸ್‌ಡಿಎಂಸಿ ರಚಿಸಲು ಒಂದು ಬಾರಿ ಕೋರಂ ಇಲ್ಲದೆ ಸಭೆ ಮುಂದೂಡಿತು. ಮತ್ತೂಂದು ಬಾರಿ ಕೋರಂ ಇದ್ದರೂ ರಚನೆಗೆ ಆಕ್ಷೇಪ ವ್ಯಕ್ತವಾಯಿತು. ಬಳಿಕ ಸಮುದಾಯದತ್ತ ಶಾಲೆ ಸಭೆಯಲ್ಲಿ ನಿಯಮ ಅನುಸಾರ ಆಯ್ಕೆ ನಡೆಸಲಾಗಿದೆ. ಇದನ್ನು ಶಾಲಾ ದಾಖಲಾತಿ ಮೂಲಕ ಪರಿಶೀಲಿಸಿದ್ದೇನೆ ಎಂದರು.

ಜಿ.ಪಂ. ಸದಸ್ಯರಾದ ಹರೀಶ್‌ ಕಂಜಿಪಿಲಿ, ಆಶಾ ತಿಮ್ಮಪ್ಪ ಮಾತನಾಡಿ, ಕೆಲವು ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಖಾತೆ ಇದೆ. ಅದು ಪಾರದರ್ಶಕವಾಗಿದ್ದರೆ ರದ್ದುಪಡಿಸಬೇಕಿಲ್ಲ. ಈ ಬಗ್ಗೆ ತನಿಖೆ ನಡೆಸಿ ವ್ಯವಹಾರ ಸಮರ್ಪಕವಾಗಿಲ್ಲದಿದ್ದರೆ ಖಾತೆ ರದ್ದುಪಡಿಸಿ ಆ ಹಣವನ್ನು ಶಾಲೆ ಖಾತೆಗೆ ಹಾಕಬಹುದು ಎಂದರು.

ಶೌಚಾಲಯದ ಚರ್ಚೆ
ನಿಂತಿಕಲ್ಲು ಬಳಿ ಲೋಕೋಪಯೋಗಿ ಇಲಾಖೆ ಪರಂಬೋಕು ಸ್ಥಳದಲ್ಲಿ ತಾ.ಪಂ. ಅನುದಾನದಡಿ ಶೌಚಾಲಯ ನಿರ್ಮಿಸಿದ ವಿಚಾರ ಚರ್ಚೆಗೆ ಈಡಾಯಿತು. ಇಒ ಭವಾನಿಶಂಕರ ಉತ್ತರಿಸಿ, ಲೋಕೋಪಯೋಗಿ ಸ್ಥಳವಾಗಿರುವುದು ನಿಜ. ಕಟ್ಟಡ ಕಟ್ಟುವಾಗ ಯಾವುದೇ ಆಕ್ಷೇಪ ಇರಲಿಲ್ಲ. ಈಗ ಆಕ್ಷೇಪ ವ್ಯಕ್ತವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದರು. ಅಬ್ದುಲ್‌ ಗಫೂರ್‌, ಪುಷ್ಪಾವತಿ ಬಾಳಿಲ ಈ ಕುರಿತು ಪರ-ವಿರೋಧ ಚರ್ಚೆ ನಡೆಸಿದರು. ಇದು ಮಾತುಕತೆ ಮೂಲಕ ಮುಗಿಸಬಹುದಾದ ವಿಚಾರ. ಅಧಕ್ಷರು ಈ ಬಗ್ಗೆ ಪ್ರಯತ್ನಿಸಿ ಎಂದು ಬೊಳ್ಳೂರು ಸಲಹೆ ನೀಡಿದರು.

ಪಾಲನ ವರದಿ ಮಾಹಿತಿ ಸುಳ್ಳು
ನಗರದ ಎಪಿಎಂಸಿ ಬಳಿಯ ವಿದ್ಯಾರ್ಥಿ ನಿಲಯದ ಸನಿಹ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು, ಹಿಂದಿನ ಸಭೆಯಲ್ಲಿ ಪ್ರಸ್ತಾವಿಸಲಾಗಿತ್ತು. ಅದು ಸರಿ ಆಗಿದೆ ಎಂಬ ಉತ್ತರವನ್ನು ನ.ಪಂ. ಅಧಿಕಾರಿಗಳು ಪಾಲನ ವರದಿಯಲ್ಲಿ ನೀಡಿದ್ದರು. ಸಭೆಯಲ್ಲಿದ್ದ ಹಾಸ್ಟೆಲ್‌ ಅಧಿಕಾರಿ ಉತ್ತರಿಸಿ, ಸಮಸ್ಯೆ ಸರಿಪಡಿಸಲಾಗಿಲ್ಲ ಎಂದರು. ಈ ಬಗ್ಗೆ ಆಶೋಕ್‌ ನೆಕ್ರಾಜೆ, ನ.ಪಂ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ಇದೊಂದು ಗಂಭೀರ ಸಂಗತಿ ಆಗಿದ್ದರೂ ಈ ರೀತಿಯ ನಿರ್ಲಕ್ಷ್ಯ ಸಲ್ಲದು. ಅಲ್ಲಿನ ಮಕ್ಕಳ ಆರೋಗ್ಯದ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು. ಈ ಬಗ್ಗೆ ನ.ಪಂ. ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಸ್ಪಂದನೆ ನೀಡಿಲ್ಲ. ಹಾಗಾಗಿ ನಗರ ಯೋಜನ ನಿರ್ದೇಶಕರ ಗಮನಕ್ಕೆ ತರುವುದಾಗಿ ಇಒ ಹೇಳಿದರು.

ನಗರದ ಕಸ, ತ್ಯಾಜ್ಯವನ್ನು ಜಾಲಸೂರು ಗ್ರಾಮದಲ್ಲಿ ಹಾಕಲು ವಿರೋಧ ಇದೆ ಎಂದು ಸದಸ್ಯ ತೀರ್ಥರಾಮ ಜಾಲಸೂರು ಹೇಳಿದರು. ಸುಬ್ರಹ್ಮಣ್ಯದಲ್ಲಿ ಅಗ್ನಿಶಾಮಕ ಘಟಕ ತೆರೆಯುವ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಪಂಚಾಯತ್‌ ಎಂಜಿನಿಯರ್‌ ವಿಭಾಗದ ಕಿರಿಯ ಎಂಜಿನಿಯರ್‌ ಅವರು ಜನಪ್ರತಿನಿಧಿಗಳ ಜತೆ ಸಮರ್ಪಕ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಂಬಂಧಿಸಿ ಸ್ಥಳ ಇತ್ಯಾದಿ ಸಮಸ್ಯೆ ಇರುವ ಬಗ್ಗೆ ತಾ.ಪಂ. ಸದನ ಸಮಿತಿ ರಚಿಸಿ ತೀರ್ಮಾನ ಮಾಡುವಂತೆ ಸದಸ್ಯ ಅಬ್ದುಲ್‌ ಗಫೂರ್‌ ಸಲಹೆ ನೀಡಿದರು. ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಮೋಹನ್‌ ಸಾಲಿಯಾನ್‌ ಪಂಚಾಯತ್‌ ಸ್ಥಳ ಮೊದಲಾದ ವಿಚಾರಗಳ ಬಗ್ಗೆ ಪ್ರಸ್ತಾವಿಸಿದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಉಪಾಧ್ಯಕ್ಷೆ ಶುಭದಾ ಎಸ್‌ ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next