Advertisement

ಪಾಯಸದ ಪರಿಮಳ

06:00 AM Oct 31, 2018 | |

ಪಾಯಸದ ರುಚಿಗೆ, ಅದರ ಘಮಕ್ಕೆ ಮರುಳಾಗದವರಿಲ್ಲ. ಹಬ್ಬದಡುಗೆಯ ಟೇಸ್ಟ್‌ ನೋಡುವ ಶಾಸ್ತ್ರ ಆರಂಭವಾಗುವುದು ಪಾಯಸವನ್ನು ನೆಕ್ಕುವ ಮೂಲಕವೇ! ಸಿಹಿಯೂಟಕ್ಕೆ ವಿಶೇಷ ಮೆರುಗು ನೀಡುವ ಪಾಯಸದಲ್ಲೂ ಹತ್ತಾರು ಬಗೆಗಳುಂಟು…

Advertisement

1.ಅವಲಕ್ಕಿ ಪಾಯಸ
ಬೇಕಾಗುವ ಸಾಮಗ್ರಿ: ದಪ್ಪ ಅವಲಕ್ಕಿ ತರಿ- 2 ಕಪ್‌, ಬೆಲ್ಲ- ಒಂದೂವರೆ ಕಪ್‌, ತೆಂಗಿನ ಕಾಯಿ- 1, ಏಲಕ್ಕಿ- 4, ಗಸಗಸೆ- 1/4 ಕಪ್‌

ಮಾಡುವ ವಿಧಾನ: ತೆಂಗಿನ ಹೋಳಿನಿಂದ ಹಾಲನ್ನು ತೆಗೆದುಕೊಳ್ಳಿ. ತೆಂಗಿನ ಹಾಲು ಎರಡು ಕಪ್‌ ಇದ್ದರೆ, ಅಷ್ಟೇ ಅಳತೆಯ ನೀರನ್ನು ಹಾಕಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಕಾಯಿಸಿ. ನಂತರ ಬೆಲ್ಲದ ಪುಡಿಯನ್ನು ಹಾಕಿ. ಬೆಲ್ಲ ಕರಗಿದ ಮೇಲೆ ಅವಲಕ್ಕಿ ತರಿಯನ್ನು ನೀರಿನಲ್ಲಿ ತೊಳೆದು, ಅದನ್ನು ನೀರಿನಂಶ ಹೋಗುವ ಹಾಗೆ ಹಿಂಡಿ, ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ. ಇನ್ನೊಂದು ತೆಂಗಿನ ಹೋಳನ್ನು ತುರಿದು, ಮಿಕ್ಸಿಯಲ್ಲಿ ಗಸಗಸೆ, ಏಲಕ್ಕಿ ಬೀಜದ ಜೊತೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅವಲಕ್ಕಿ ಚೆನ್ನಾಗಿ ಬೆಂದ ನಂತರ, ರುಬ್ಬಿದ ಮಿಶ್ರಣವನ್ನು ಸೇರಿಸಿ, ತಳ ಹತ್ತದಂತೆ ಸೌಟಿನಿಂದ ತಿರುವುತ್ತಾ ಇರಿ. ಚೆನ್ನಾಗಿ ಕುದಿ ಬಂದ ನಂತರ ಒಲೆಯಿಂದ ಕೆಳಗಿಳಿಸಿ.

2. ಸೇಬು ಹಣ್ಣಿನ ಪಾಯಸ
ಬೇಕಾಗುವ ಸಾಮಗ್ರಿ: ಸೇಬು ಹಣ್ಣು- 1/2 ಕೆ.ಜಿ., ಹಾಲು- 1 ಲೀ., ಒಣ ಅಂಜೂರ- 4, ಒಣ ದ್ರಾಕ್ಷಿ, ತುಪ್ಪ- 4 ಚಮಚ, ಏಲಕ್ಕಿ ಪುಡಿ -1/4 ಚಮಚ, ಸಕ್ಕರೆ- ಒಂದೂವರೆ ಕಪ್‌, ಚಿರೋಟಿ ರವೆ- 2 ಚಮಚ.

ಮಾಡುವ ವಿಧಾನ: ಸೇಬಿನ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನು ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ, ಒಣ ದ್ರಾಕ್ಷಿಯನ್ನು ಹುರಿಯಿರಿ. ನಂತರ ಅಂಜೂರವನ್ನು ಚಿಕ್ಕ ಚಿಕ್ಕ ಚೂರು ಮಾಡಿಕೊಳ್ಳಿ. ಒಂದು ಚಮಚ ತುಪ್ಪದಲ್ಲಿ, ಸೇಬು ಹಣ್ಣಿನ ತುಣುಕುಗಳನ್ನು ಬಾಡಿಸಿಕೊಳ್ಳಿ. ನಂತರ ಅರ್ಧ ಲೀಟರ್‌ ಹಾಲು ಹಾಕಿ, ಸೇಬು ಹಣ್ಣು ಸೇರಿಸಿ ಕುದಿಸಿ. ಆ ಮಿಶ್ರಣ ಚೆನ್ನಾಗಿ ಬೆಂದ ಮೇಲೆ, ಉಳಿದ ಹಾಲನ್ನು ಹಾಕಿ ಕುದಿಸಿ. ಕುದಿಯುವಾಗ ಹುರಿದ ಚಿರೋಟಿ ರವೆಯನ್ನು ಸೇರಿಸಿ. ನಂತರ, ಹುರಿದ ದ್ರಾಕ್ಷಿ, ಅಂಜೂರ, ಏಲಕ್ಕಿ ಪುಡಿ ಹಾಕಿ, ಹತ್ತು ನಿಮಿಷ ಬೇಯಿಸಿ ಒಲೆಯಿಂದ ಕೆಳಗಿಳಿಸಿ.

Advertisement

3. ಖರ್ಜೂರ ಮತ್ತು ಬಾದಾಮಿ ಪಾಯಸ
ಬೇಕಾಗುವ ಸಾಮಗ್ರಿ: ಖರ್ಜೂರ-12, ಬೆಲ್ಲ- ಸಿಹಿ ಬೇಕಾದಷ್ಟು (ಖರ್ಜೂರ ಸಿಹಿ ಇರುವುದರಿಂದ ಜಾಸ್ತಿ ಬೆಲ್ಲ ಬೇಡ), ಹಾಲು- 2 ಕಪ್‌, ಬಾದಾಮಿ- 12, ಕುಂಕುಮ ಕೇಸರಿ ದಳಗಳು- ಸ್ವಲ್ಪ, ಏಲಕ್ಕಿ-3, ಲವಂಗ- 3

ಮಾಡುವ ವಿಧಾನ: ಬಾದಾಮಿಯನ್ನು ಕಾಲು ಗಂಟೆ ನೀರಿನಲ್ಲಿ ನೆನೆಸಿ. ಮಿಕ್ಸಿ ಜಾರಿಗೆ ಖರ್ಜೂರ, ಬಾದಾಮಿ, ಏಲಕ್ಕಿ, ಲವಂಗ ಹಾಕಿ ನುಣ್ಣಗೆ ರುಬ್ಬಿ. ಅರೆದ ಪದಾರ್ಥಗಳಿಗೆ ಎರಡು ಕಪ್‌ ನೀರು ಹಾಕಿ, ಒಲೆಯ ಮೇಲೆ ಇಟ್ಟು ಕಾಯಿಸಿ. ಕುದಿ ಬಂದಾಗ ಬೆಲ್ಲದ ಪುಡಿ ಹಾಕಿ. ನಂತರ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ಕೊನೆಗೆ ಕೇಸರಿ ಮಿಶ್ರಿತ ಹಾಲು ಹಾಕಿ, ಹತ್ತು ನಿಮಿಷ ಚೆನ್ನಾಗಿ ಕುದಿಸಿದರೆ ಪಾಯಸ ಸಿದ್ಧ. 

4.ಕ್ಯಾರೆಟ್‌ ಪಾಯಸ
ಬೇಕಾಗುವ ಸಾಮಗ್ರಿ: ಕ್ಯಾರೆಟ್‌- 1/4 ಕೆ.ಜಿ., ಗೋಡಂಬಿ-15,  ಬಾದಾಮಿ ಉದ್ದುದ್ದ ಕತ್ತರಿಸಿದ್ದು ಸ್ವಲ್ಪ, ದ್ರಾಕ್ಷಿ ಸ್ವಲ್ಪ, ತುಪ್ಪ-2 ಚಮಚ, ಏಲಕ್ಕಿ ಪುಡಿ-1/2 ಚಮಚ, ಸಕ್ಕರೆ- 1/2 ಕಪ್‌, ಹಾಲು-1/2 ಲೀ.

ತಯಾರಿಸುವ ವಿಧಾನ: ಕುಕ್ಕರ್‌ನ ಪಾತ್ರೆಯಲ್ಲಿ ತೆಳುವಾಗಿ ಕತ್ತರಿಸಿದ ಕ್ಯಾರೆಟ್‌ ಮತ್ತು ಗೋಡಂಬಿಯನ್ನು ಹಾಕಿ, ಸ್ವಲ್ಪ ನೀರು ಹಾಕಿ ಏಳೆಂಟು ವಿಷಲ್ ಕೂಗಿಸಿ. ತಣ್ಣಗಾದ ಮೇಲೆ ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ, ಬಾದಾಮಿ ಮತ್ತು ದ್ರಾಕ್ಷಿಯನ್ನು ಹುರಿಯಿರಿ. ಹಾಲನ್ನು ಹಾಕಿ ಕುದಿಸಿ, ಅದಕ್ಕೆ ಸಕ್ಕರೆ ಸೇರಿಸಿ. ರುಬ್ಬಿ ಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಕೈಯಾಡಿಸಿ, ಏಲಕ್ಕಿ ಪುಡಿ ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಒಲೆಯಿಂದ ಇಳಿಸಿ. ಬಿಸಿಯಾಗಿ ಅಥವಾ ಫ್ರಿಡ್ಜ್ನಲ್ಲಿಟ್ಟು ತಣ್ಣಗೆ ಮಾಡಿ ಕುಡಿದರೆ ರುಚಿ ಇನ್ನೂ ಜಾಸ್ತಿ.

ವೇದಾವತಿ ಹೆಚ್‌. ಎಸ್‌., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next