ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಸಂಖ್ಯೆಯಲ್ಲಿ ಜರ್ನಿಯ ಕಥೆಗಳು ಬಂದಿವೆ. ಇಂಥಾ ಚಿತ್ರಗಳ ಪಾಲಿಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಈ ಪಯಣಿಗರ ಕಥೆ ಮಾಮೂಲಿಯಾಗಿರಬಾರದೆಂಬ ಸಂಕಲ್ಪದಿಂದಲೇ ರಾಜ್ ಗೋಪಿ ಚೆಂದದ್ದೊಂದು ಕಥೆ ಸೃಷ್ಟಿಸಿದ್ದಾರೆ. ಸದ್ದೇ ಇಲ್ಲದಂತೆ ಪಯಣಿಗರು ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈ ಸಿನಿಮಾವೀಗ ಟ್ರೈಲರ್ ಮೂಲಕವೇ ನಿರ್ಣಾಯಕವಾಗಿ ಸದ್ದು ಮಾಡುತ್ತಿದೆ.
ಕೊಳನ್ ಕಲ್ ಮಹಾಗಣಪತಿ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಇದೇ ತಿಂಗಳ ಹದಿನೇಳರಂದು ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಇಂಥಾ ಪಯಣದ ಕಥೆಗಳು ಹಾರರ್ ಅಂಶಗಳತ್ತಲೂ ವಾಲಿಕೊಳ್ಳೋದಿದೆ. ಆದರೆ ಈ ಸಿನಿಮಾದಲ್ಲಿ ಅಂಥಾದ್ದೇನೂ ಇಲ್ಲ. ಆದರಿದು ಮಾಮೂಲಿ ಜರ್ನಿಯ ಕಥೆಯಂತೂ ಅಲ್ಲವೇ ಅಲ್ಲ.
ಬೆಂಗಳೂರಿನಿಂದ ಗೋವಾದತ್ತ ಹೊರಡೋ ಐವರು ನಡುವಯಸ್ಸಿನ ಗೆಳೆಯರ ಸುತ್ತಾ ಈ ಕಥೆ ಸುತ್ತುತ್ತದೆ. ಈ ಐದೂ ಪಾತ್ರಗಳೂ ಕೂಡಾ ಐದು ಥರದ ವ್ಯಕ್ತಿತ್ವಗಳನ್ನು ಹೊಮ್ಮಿಸುತ್ತವೆ. ಈ ಪಯಣದುದ್ದಕ್ಕೂ ನಾನಾ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ವಿಶೇಷವೆಂದರೆ ಒಟ್ಟಾರೆಯಾಗಿ ಶೇಖಡಾ ಎಂಬತ್ತರಷ್ಟು ಭಾಗದ ಚಿತ್ರೀಕರಣ ಕಾರೊಳಗೆಯೇ ನಡೆಯುತ್ತದೆ. ಈ ಚಿತ್ರೀಕರಣ ನಡೆಸಲು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಪಟ್ಟಿರುವ ಪಡಿಪಾಟಲಿನ ಕಥೆಯೇ ಮತ್ತೊಂದು ಸಿನಿಮಾಕ್ಕಾಗುವಷ್ಟಿದೆ!
ಇಂಥಾ ಶ್ರಮದ ಕಾರಣದಿಂದಲೇ ಪಯಣಿಗರು ಚಿತ್ರ ಭಿನ್ನವಾಗಿ ಮೂಡಿ ಬಂದಿದೆ ಅನ್ನೋದು ನಿರ್ದೇಶಕರ ಭರವಸೆ. ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಮತ್ತು ರವಿಚಂದ್ರ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.