ಮುಂಬಯಿ: ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಹೊರೆಸಿರುವ ನಟಿ ಪಾಯಲ್ ಘೋಷ್ ಸೋಮವಾರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ (ಅಠವಳೆ ಬಣ) ಸೇರ್ಪಡೆಗೊಂಡಿದ್ದಾರೆ.
ಪಕ್ಷದ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರ ಸಮ್ಮುಖದಲ್ಲಿ ಆರ್‌ಪಿಐಗೆ ಸೇರ್ಪಡೆಗೊಂಡ ಅವರನ್ನು ಪಕ್ಷದ ಮಹಿಳಾ ವಿಭಾಗದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಯಿತು. ಘೋಷ್ ಮತ್ತು ಇತರರ ಸೇರ್ಪಡೆ ಪಕ್ಷವನ್ನು ಬಲಪಡಿಸಲಿದೆ ಎಂದು ಅಠವಳೆ ಹೇಳಿದ್ದಾರೆ. ಅನುರಾಗ್ ಕಶ್ಯಪ್ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದೂ ಅವರು ಪ್ರತಿಪಾದಿಸಿದ್ದಾರೆ. ಘೋಷ್ ಅವರ ಆರೋಪಗಳನ್ನು ಚಿತ್ರ ನಿರ್ಮಾಪಕ ನಿರಂತರವಾಗಿ ನಿರಾಕರಿಸುತ್ತಿದ್ದಾರೆ.
ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲದೊಂದಿಗೆ ನಾನು ಆರ್‌ಪಿಐಗೆ ಸೇರ್ಪಡೆಗೊಂಡಿದ್ದೇನೆ. ಅನುರಾಗ್ ಕಶ್ಯಪ್ ವಿರುದ್ಧದ ಹೋರಾಟದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಅಠವಳೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪಾಯಲ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ:ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಹತ್ಯೆ
ಕೋಲ್ಕತ್ತಾ ಮೂಲದ ಪಾಯಲ್ ಘೋಷ್ ಮಾಡೆಲ್ ಆಗಿ ಮಿಂಚಿ ನಂತರ ಚಿತ್ರರಂಗ ಪ್ರವೇಶಿಸಿದ್ದರು. 2009ರಲ್ಲಿ ತೆಲುಗು ಚಿತ್ರ ಪ್ರಣಯಂ ಮೂಲಕ ವೃತ್ತಿ ಆರಂಭಿಸಿ ನಂತರ ಊಸರವೆಳ್ಳಿ, ಪಟೇಲ್ ಕಿ ಪಂಜಾಬಿ ಶಾದಿ ಮುಂತಾದ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲೂ ಅಭಿನಯಿಸಿರುವ ಪಾಯಲ್ ಘೋಷ್, ಸೂರಜ್ ನಾಯಕನಟನಾಗಿದ್ದ ವರ್ಷಧಾರೆ ಚಿತ್ರದಲ್ಲಿ ನಟಿಸಿದ್ದಾರೆ.