ಸೇಡಂ: ಸ್ಥಳೀಯ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ಕನಿಷ್ಟ ವೇತನ ನೀಡಬೇಕು ಎಂದು ವಾಸವಾದತ್ತ ಸಿಮೆಂಟ್ ಜನರಲ್ ವರ್ಕರ್ ಯೂನಿಯನ್ ಅಧ್ಯಕ್ಷ ಅನಿಲಕುಮಾರ ಪಾಟೀಲ ತೇಲ್ಕೂರ್ ಆಗ್ರಹಿಸಿದರು.
ಪಟ್ಟಣದ ವಾಸವಾದತ್ತ ಸಿಮೆಂಟ್ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಯಮಗಳ ಪ್ರಕಾರ ಕಳೆದ ಎರಡು ತಿಂಗಳ ಹಿಂದೆಯೇ ಕಾರ್ಮಿಕರ ವೇತನ ಹೆಚ್ಚಳ ಮಾಡಬೇಕಿತ್ತು. ಆದರೆ ಇಲ್ಲಿಯವರೆಗೂ ಹೆಚ್ಚಳ ಮಾಡಿಲ್ಲ. ಈ ಕುರಿತು ಮಜ್ದೂರ್ ಸಂಘ ಕಳೆದ ವರ್ಷದಿಂದ ಸರಣಿ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಕಾರ್ಖಾನೆಗಳ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದವರ ಸ್ಥಾನಕ್ಕೆ ನೇಮಕ ಮಾಡಿಕೊಳ್ಳುತ್ತಿಲ್ಲ. ಆ ಕೆಲಸದ ಹೊರೆಯನ್ನು ಗುತ್ತಿಗೆ ಕಾರ್ಮಿಕರ ಮೇಲೆ ಹೊರಿಸಲಾಗುತ್ತಿದೆ. ಕೂಡಲೇ ಖಾಲಿ ಉಳಿದಿರುವ ಸ್ಥಳಗಳಿಗೆ ಕಾಯಂ ನೌಕರರನ್ನು ನೇಮಕ ಮಾಡಿಕೊಳ್ಳಬೇಕು. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭಾರತೀಯ ಮಜದೂರ ಸಂಘದ ರಾಜ್ಯಾಧ್ಯಕ್ಷ ಶಂಕರ ಸುಲೇಗಾಂವ ಮಾತನಾಡಿ, ಸಂಘದಿಂದ ಕಾರ್ಮಿಕರ ಸಮಸ್ಯೆ ಕುರಿತು ಒಂದು ದಿನದ ಸಾಂಕೇತಿಕ ಧರಣಿ ಆಯೋಜಿಸಿದ್ದೇವೆ. ಕಾರ್ಮಿಕರ ಕಷ್ಟಗಳಿಗೆ ಕಾರ್ಖಾನೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೇ ಮುಂದಿನ ಹೋರಾಟ ಅನಿವಾರ್ಯ ಎಂದರು.
ಯೂನಿಯನ್ ಪ್ರಧಾನ ಕಾರ್ಯದರ್ಶಿ ರಾಮದಾಸ ಚವ್ಹಾಣ, ಉಪಾಧ್ಯಕ್ಷರಾದ ಸಿ.ಕೆ. ಶ್ರೀನಿವಾಸ, ಮಾಣಿಕ ರೆಡ್ಡಿ, ಶಬ್ಬಿರ ಮಿಯಾ, ಕಾರ್ಯದರ್ಶಿ ಶಿವುಕುಮಾರ ಅಲ್ಲೂರ, ಪ್ರಮುಖರಾದ ಆರ್. ಬಸವರಾಜ, ಮಂಜುನಾಥ ಜಾಕಾ, ಶಿವಲಿಂಗ, ರವಿ ಕೊಳ್ಳಿ, ಶ್ರೀನಿವಾಸ ಬಳ್ಳಾರಿ, ಶಿವಾನಂದ ಸ್ವಾಮಿ ಇನ್ನಿತರರಿದ್ದರು.