Advertisement

ನಮಗೂ ಸರ್ಕಾರಿ ನೌಕರರಂತೆ ವೇತನ ನೀಡಿ

04:45 PM Feb 12, 2020 | Team Udayavani |

ಮಂಡ್ಯ: ವೇತನ ತಾರತಮ್ಯ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ನೌಕರರು, ಅಪರ ಜಿಲ್ಲಾಧಿಕಾರಿ ಯೋಗೇಶ್‌ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ರಾಜ್ಯಾಧ್ಯಕ್ಷ ಡಾ. ಕೆ.ಎಸ್‌.ಶರ್ಮಾ ನೇತೃತ್ವದಲ್ಲಿ ಸರ್ಕಾರ ಹಾಗೂ ಆಡಳಿತ ವರ್ಗಕ್ಕೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ನಮಗೂ ಅನ್ವಯಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮೂಲ ಸೌಲಭ್ಯಗಳಿಲ್ಲ: ಸಾರಿಗೆ ನೌಕರರ ಹೊಸ ವೇತನ ಪರಿಷ್ಕರಣೆ 2020ರ ಜ.1ರಿಂದಲೇ ಜಾರಿಗೆ ಬರಬೇಕಿತ್ತು. ಆದರೂ ಯಾವುದೇ ಪ್ರಗತಿ ಕಾಣದೆ ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶ್ರಮಜೀವಿಗಳಾದ ನಾವು ಚಳಿ, ಮಳೆಯನ್ನದೆ, ಮಂಜು- ಬಿಸಿಲೆನ್ನದೆ ಹಗಲು ಇರುಳೆನ್ನದೆ ಹಸಿವು ಬಾಯಾರಿಕೆಗಳೆಲ್ಲವನ್ನೂ ಬಿಟ್ಟು ವ್ಯವಸ್ಥಿತ ಮೂಲ ಸೌಕರ್ಯಗಳಿಲ್ಲದೆ, ವರ್ಷದ 365 ದಿನವೂ ಸತತವಾಗಿ ದುಡಿದು ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇವೆ. ಊರಿನವರೆಲ್ಲಾ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರೆ, ನಾವು ಮಾತ್ರ ಯಾವುದೋ ಊರಿನಲ್ಲಿ ತಂಗಿರುತ್ತೇವೆ. ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುತ್ತೇವೆ. ಎಲ್ಲಿಯೋ ನೀರು, ಎಲ್ಲಿಯೋ ಆಹಾರ, ಎಲ್ಲಿಯೋ ನಿದ್ರೆ, ಕುಟುಂಬ ಸದಸ್ಯರಿಂದ ದೂರವಾದ ಒಂಟಿ ಜೀವನ. ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದೆ ಅತಿ ಹೆಚ್ಚು ಅಕಾಲಿಕ ಮರಣಕ್ಕೆ ತುತ್ತಾಗುವ ಸಿಬ್ಬಂದಿಗಳಾಗಿದ್ದು, ಸಾರ್ವಜನಿಕರಿಗಾಗಿ ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ ಎಂದು ಅಸಹಾಯಕತೆ ತೋಡಿಕೊಂಡರು.

ಪ್ರತಿಭಟನೆಯಲ್ಲಿ ನಂಜುಂಡಯ್ಯ, ಸುಧೀರ್‌, ಯೋಗೇಶ್‌, ಚಂದ್ರಶೇಖರ್‌, ಗೋಪಾಲ ಕೃಷ್ಣ, ಬಸವ ರಾಜು, ರಮೇಶ, ದಯಾನಂದ, ನಾಗರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next