ನಾಗಮಂಗಲ: ತಾಲೂಕಿನ ಮಂಗಳೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಾಲಾಳು ಗ್ರಾಮದ ಬಳಿಯ ಜಮೀನನ್ನು ರಾಜ್ಯ ಗೃಹಮಂಡಳಿಯು ವಸತಿ ಸಮುಚ್ಚಯ ಮಾಡಲು ರೈತರಿಂದ ಭೂಮಿ ವಶಪಡಿಸಿಕೊಂಡಿದೆ. ಭೂಮಾಲೀಕರಿಗೆ ನೀಡುತ್ತಿರುವ ಬೆಲೆ ತುಂಬಾ ಕಡಿಮೆ ಎಂದು ರೈತರು ಪ್ರತಿರೋಧ ವ್ಯಕ್ತಪಡಿಸಿದರು.
ಗೃಹಮಂಡಳಿಯು ಪಡೆಯುವ ಬೆಲೆಯಲ್ಲಿ ಭೂಮಿಯ ಮಾಲೀಕರಿಗೆ ಶೇ.50 ರಷ್ಟು ಮತ್ತು ಅಭಿವೃದ್ಧಿಗೆ ಮಂಡಳಿಯವರು ಶೇ.50 ರಷ್ಟನ್ನು ನಿಗದಿ ಮಾಡಲಿ ಎಂದು ಜಮೀನಿನ ಮಾಲೀಕರು ಅಧಿಕಾರಿಗಳನ್ನು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಸುರೇಶ್‌ಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ರೈತರೊಂದಿಗಿನ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಭೂಮಿಯ ಮಾಲೀಕರು ತಮ್ಮ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ರಾಜ್ಯ ಗೃಹಮಂಡಳಿಯ ಮುಖ್ಯಎಂಜಿನಿಯರ್ ಭೂಮಿಯ ಮಾಲೀಕರಿಗೆ ಈ ಯೋಜನೆ ಕುರಿತು ಪೂರ್ಣ ವಿವರಣೆ ನೀಡಿ ನಿಮ್ಮ ಜಮೀನಿಗೆ ಉತ್ತಮವಾದ ಬೆಲೆಯನ್ನು ನಾವು ನೀಡುತ್ತಿದ್ದೇವೆ. ಈ ಹಿಂದೆ ಶೇ.30 ರಷ್ಟು ಮಾತ್ರ ನೀಡುವುದಾಗಿ ತಿಳಿಸಿದ್ದರು. ಆದರೆ ರೈತರ ಒತ್ತಾಯದ ಮೇರೆಗೆ ಶೇ.40 ರಷ್ಟು ಹಣವನ್ನು ನೀಡುತ್ತೇವೆ. ತಾವು ಜಮೀನನ್ನು ಬಿಟ್ಟುಕೊಟ್ಟು ಸಹಕರಿಸಿ ಎಂದು ಮನವಿ ಮಾಡಿದರು. ಎಂಜಿನಿಯರ್ ಮಾತಿಗೆ ಪ್ರತಿರೋಧ ವ್ಯಕ್ತಪಡಿಸಿದ ಜಮೀನಿನ ಮಾಲೀಕರು, ಈ ಹಿಂದೆ ಗೃಹಮಂಡಳಿಯಲ್ಲಿನ ಐಎಎಸ್ ಅಧಿಕಾರಿಯಾಗಿದ್ದ ನಾಗರಾಜುರವರು ನಮ್ಮ ಭೂಮಿಗೆ ನೀಡುವ ಬೆಲೆ ಕುರಿತು ತಪ್ಪು ಮಾಹಿತಿ ನೀಡಿ ಮೋಸದಿಂದ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಹಾಲಾಳು ಗ್ರಾಮದ ಜಮೀನಿನ ಮಾಲೀಕನೊರ್ವ ಮಾತನಾಡಿ, ಪಾಲಿಕೆಗಳ ವ್ಯಾಪ್ತಿಯ ಜಮೀನಿಗೆ ಶೇ.50 ರಷ್ಟನ್ನು ಜಮೀನಿನ ಮಾಲೀಕರಿಗೆ ನೀಡುತ್ತೀರಿ. ಆದರೆ ಅವರುಗಳಲ್ಲಿ ಯಾರೊಬ್ಬರು ಸಹ ಕೃಷಿ ಚಟುವಟಿಕೆಗಳನ್ನು ಮಾಡುವುದಿಲ.್ಲ ಆದರೆ ಗ್ರಾಮೀಣ ಪ್ರದೇಶದ ನಾವು ಕೃಷಿಯನ್ನೆ ಅವಲಂಬಿಸಿದ್ದೇವೆ. ಆದರೆ ನಮಗೆ ನಗರ ಪ್ರದೇಶದ ಜನರಿಗಿಂತ ಕಡಿಮೆ ಬೆಲೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು. ಮೈಸೂರು ವಿಭಾಗೀಯ ಎಂಜಿನಿಯರ್ ಸೋಮಶೇಖರ್, ತಹಶೀಲ್ದಾರ್ ಎಂ.ವಿ.ರೂಪ ಹಾಗೂ ಹಾಲಾಳು, ಗೊಲ್ಲರಹಟ್ಟಿ, ಇರುಬನಹಳ್ಳಿ ಗ್ರಾಮದ ಭೂಮಾಲೀಕರು ಉಪಸ್ಥಿತರಿದ್ದರು.