Advertisement

ಗ್ರಾಮೀಣಾಭಿವೃದ್ದಿ ಪದನಾಮಕ್ಕಾದರೂ ಬೆಲೆ ಕೊಡಿ

02:18 PM Feb 20, 2022 | Team Udayavani |

ಸಿಂಧನೂರು: ಕಳೆದ ಹಲವು ದಿನಗಳಿಂದ ರೌಡಕುಂದಾ ಗ್ರಾಪಂ ಸಫಾಯಿ ಕೆಲಸಗಾರರ ಮೂಲಕ ಸಾಗಿದೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂಬ ಪದನಾಮಕ್ಕಾದರೂ ಬೆಲೆ ಕೊಟ್ಟು ಇಲ್ಲಿಗೆ ಕೆಲಸ ನಿರ್ವಹಿಸಲು ಬನ್ನಿ ಎಂದು ರೌಡಕುಂದಾ ಗ್ರಾಪಂ ಅಧ್ಯಕ್ಷ ಮಹಾಂತೇಶ ಹಿರೇಗೌಡರ್‌ ಆಹ್ವಾನಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಂಚಾಯತ್‌ ಗೆ ಇರುವ ಇಂಚಾರ್ಜ್‌ ಪಿಡಿಒ ಕೂಡ ಸರಿಯಾಗಿ ಬರುತ್ತಿಲ್ಲ. ಅವರು ಪ್ರಭಾರ ಬದಲಾಯಿಸಲು ತಾಪಂಗೆ ಪತ್ರ ಕೊಟ್ಟಿದ್ದಾರೆ. ಇನ್ನು ಅಕೌಂಟೆಂಟ್‌ ಹುದ್ದೆಯೂ ಖಾಲಿ, ಬಿಲ್‌ಕಲೆಕ್ಟರ್‌ ಕೂಡ ಇಲ್ಲ. ಯಾರ ಜೊತೆಯಲ್ಲಿ ನಾವು ಕೆಲಸ ತೆಗೆದುಕೊಳ್ಳಬೇಕು. ಆದರೂ, ನಾನು ವೈಯಕ್ತಿಕ ಕಾಳಜಿ ವಹಿಸಿ ಕೆರೆ ಅಭಿವೃದ್ಧಿ, ಮರಂ ತುಂಬಿಸುವುದು ಸೇರಿ ಹಲವು ಕೆಲಸ ಮಾಡಿರುವೆ. ಸ್ವಾಭಿಮಾನಕ್ಕೆ ಬದ್ಧನಾಗಿ ಈ ಕೆಲಸ ಮಾಡಿರುವೆ ಎಂದರು.

4.50 ಕೋಟಿ ರೂ. ಅವ್ಯವಹಾರ

ರೌಡಕುಂದಾ ಗ್ರಾಪಂನಲ್ಲಿ ಈ ಹಿಂದೆ 4.50 ಕೋಟಿ ರೂ. ಅವ್ಯವಹಾರವಾಗಿದೆ. ಸತ್ತವರು ಹಾಗೂ ಗೊತ್ತಿಲ್ಲದವರ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡಿ, ಬಿಲ್‌ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಳೇ ಬಿಲ್‌ಕಲೆಕ್ಟರ್‌ ರಂಜಾನ್‌ಸಾಬ್‌ ಮೇಲೆ ಮೊಕದ್ದಮೆ ಹೂಡಲಾಗಿದೆ. 22 ಲಕ್ಷ ರೂ. ವಸೂಲಿ ಮಾಡುವಂತೆ ಈ ಹಿಂದೆ ಸರಕಾರವೇ ಆದೇಶ ಮಾಡಿದೆ. ಆದರೂ, ಈ ಯಾವುದರ ಬಗ್ಗೆಯೂ ತನಿಖೆ ನಡೆಯುತ್ತಿಲ್ಲ. ರಂಜಾನ್‌ ಸಾಬ್‌ ಗ್ರಾಪಂ ಕಟ್ಟಡದ ಕಾಂಪೌಂಡ್‌ ಒಡೆದು ಮನೆ ಕಟ್ಟಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಒಂಬಡ್ಸಮನ್‌ ತನಿಖೆ ಸರಿಯಲ್ಲ

Advertisement

ನರೇಗಾಗಕ್ಕೆ ಸಂಬಂಧಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ನೆಡಲು ಅಗೆದ ಗುಂಡಿಗಳಲ್ಲಿ ಹೂಳು ತುಂಬಿದೆ ಎಂದು ವರದಿ ಕೊಟ್ಟಿರುವ ರಾಜ್ಯ ಸರಕಾರ ನಿಯೋಜಿತ ಒಂಬಡ್ಸಮನ್‌ ವರದಿ ಸಮರ್ಪಕವಾಗಿಲ್ಲ. ಅವರು ಪಕ್ಕದ ಮಲ್ಕಾಪುರದವರೆಂದು ಗೊತ್ತಾಗಿದೆ. ಈ ಹಿಂದಿನ ಇಬ್ಬರು ಪಿಡಿಒ, ಹಳೇ ಇಒ ಪವನ್‌ ಕುಮಾರ್‌ ಅವರ ಷಡ್ಯಂತ್ರದಿಂದ ತಪ್ಪು ತನಿಖಾ ವರದಿ ಕೊಟ್ಟಿದ್ದಾರೆ. ಯಾವುದೇ ಗುಂಡಿಯನ್ನು ನನ್ನ ಹೊಲದಲ್ಲಿ ತೆಗೆಯಿಸಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ಅಧ್ಯಕ್ಷನಾಗಿ ನಾನು ಅದನ್ನು ಒಪ್ಪುತ್ತೇನೆ. ಅದನ್ನು ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದರು.

ಗ್ರಾಪಂ ಸದಸ್ಯರಾದ ವಿಜಯಪ್ರಕಾಶ್‌ ಬಂಗಾರಿ ಕ್ಯಾಂಪ್‌, ಹನುಮಂತಪ್ಪ ಅರಳಹಳ್ಳಿ, ರವಿಕುಮಾರ್‌ ಸೇರಿದಂತೆ ಇತರರು ಇದ್ದರು.

ಆರೋಪವನ್ನು ಒಪ್ಪಿಕೊಳ್ಳುವೆ

ತನಿಖಾ ವರದಿಯಲ್ಲಿ ನಮೂದಿಸಿದ ಆರೋಪವನ್ನು ನಾನು ಒಪ್ಪಿಕೊಳ್ಳುವೆ. ಒಂದು ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೋ ಅದು ತಪ್ಪೇ. ಆದರೆ, ಆ ವರದಿಯೇ ಸರಿಯಿಲ್ಲ. ತನಿಖೆ ನಡೆಸಿದ ವ್ಯಕ್ತಿ ರಾಜಕೀಯ ಒತ್ತಡಗಳಿಗೆ ಬಲಿಯಾಗಿ ವರದಿ ಕೊಟ್ಟಿದ್ದಾರೆ ಎಂದು ಮಹಾಂತೇಶ ಹಿರೇಗೌಡರ್‌ ಹೇಳಿಕೊಂಡರು. ಮೂಗನ ಜಾಬ್‌ಕಾರ್ಡ್‌ ನಂಬರ್‌ ನಮೂದಿಸಿ, ಅವರು ಕೆಲಸ ಮಾಡಿಲ್ಲವೆಂದು ಬರೆದುಕೊಟ್ಟಿದ್ದಾರೆ. ಹಾಗೆ. ಇಂತಹ ಹಲವು ತಪ್ಪುಗಳಿವೆ. ಅದನ್ನು ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಶ್ನಿಸಲಾಗುವುದು. ಭ್ರಷ್ಟಾಚಾರದ ಕೂಪವಾಗಿದ್ದ ಗ್ರಾಮ ಪಂಚಾಯತ್‌ ಸ್ವತ್ಛಗೊಳಿಸಲು ಹೊರಟಿರುವ ನಮಗೆ ತಾಪಂ ಹಾಗೂ ಜಿಪಂ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next