Advertisement

15 ದಿನದಲ್ಲಿ ರೈತರ ಬಾಕಿ ಪಾವತಿಸಿ

06:39 AM Jun 23, 2020 | Suhan S |

ಬೆಳಗಾವಿ: ಜಿಲ್ಲೆಯಲ್ಲಿ ಇದುವರೆಗೆ 17 ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣವನ್ನು ಪಾವತಿ ಮಾಡಿದ್ದು, ಒಟ್ಟಾರೆ ಶೇ. 96 ರಷ್ಟು ಬಿಲ್‌ ಮೊತ್ತವನ್ನು ಪಾವತಿಸಲಾಗಿದೆ. ಬಾಕಿ ಉಳಿಸಿರುವ ಕಾರ್ಖಾನೆಗಳು 15 ದಿನಗಳಲ್ಲಿ ರೈತರಿಗೆ ಹಣ ಪಾವತಿಸಬೇಕು ಎಂದು ಸಕ್ಕರೆ ಮತ್ತು ಕಾರ್ಮಿಕ ಇಲಾಖೆ ಸಚಿವ ಅರಬೈಲ್‌ ಶಿವರಾಮ ಹೆಬ್ಟಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಸಕ್ಕರೆ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕ್ಕರೆ ಸಚಿವಾಲಯವನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾಕಷ್ಟು ಮನವಿಗಳು ಬರುತ್ತಿದ್ದು, ಒಂದೇ ಇಲಾಖೆಯನ್ನು ಸ್ಥಳಾಂತರಿಸಲು ಆಗುವುದಿಲ್ಲ. ಹಾಗಾಗಿ ಇಲಾಖೆಗಳು ಬರುವಾಗ ಸಕ್ಕರೆ ಇಲಾಖೆಯ ಕಚೇರಿಯನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೋವಿಡ್‌-19 ಪರಿಣಾಮವಾಗಿ ಅನೇಕ ಕಾರ್ಖಾನೆಗಳು ಕಾರ್ಮಿಕರಿಗೆ ಸಂಬಳ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಅದರ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು. 100ಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಕಾರ್ಖಾನೆಯ ಮಾಲೀಕರು ಸರ್ಕಾರಕ್ಕೆ ತಿಳಿಸದೇ ತಮ್ಮ ಕಾರ್ಖಾನೆಗಳನ್ನು ಮುಚ್ಚುವಂತಿಲ್ಲ. ಈ ರೀತಿ ಮಾಡಿರುವ ಕಾರ್ಖಾನೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.

ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಕಾರ್ಮಿಕರಿಗೆ 5,000 ಪರಿಹಾರ ಧನ ವಿತರಣೆ ಮಾಡಲಾಗುತ್ತಿದ್ದು, ಎಲ್ಲ ಅರ್ಹ ಕಾರ್ಮಿಕರಿಗೆ 20 ದಿನಗಳಲ್ಲಿ ಪರಿಹಾರ ಧನ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ಒಟ್ಟು 20 ಲಕ್ಷ 30 ಸಾವಿರ ಕಾರ್ಮಿಕರಿದ್ದು ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಹಂತ ಹಂತವಾಗಿ ತಲುಪಿಸಲಾಗುತ್ತಿದೆ. ಕಾರ್ಮಿಕ ಕಾರ್ಡ್‌ ಹೊಂದಿರದ 7 ಲಕ್ಷ 80 ಸಾವಿರ ಕಾರ್ಮಿಕರಿದ್ದು, 3 ಲಕ್ಷ 34 ಸಾವಿರ ಕಾರ್ಮಿಕರ ದತ್ತಾಂಶ ಸಂಗ್ರಹಿಸಲಾಗಿದೆ. ಉಳಿದ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಿ ಅವರಿಗೂ ಪರಿಹಾರ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಕೋವಿಡ್‌-19 ಸಂದರ್ಭದಲ್ಲಿ ಕ್ಷೌರಿಕ ಮತ್ತು ಅಗಸರಿಗೆ ಸಾಕಷ್ಟು ತೊಂದರೆಗಳಾಗಿದ್ದು ಅವರಿಗೆ ಪರಿಹಾರವಾಗಿ ಐದು ಸಾವಿರ ನೀಡಬೇಕು ಎಂದು ಸರ್ಕಾರ ಘೋಷಣೆ ಮಾಡಿದೆ. ಕ್ಷೌರಿಕರು ಮತ್ತು ಅಗಸರು ಪರಿಹಾರ ಧನ ಪಡೆಯಲು ಯಾವದೇ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ. ಸ್ಥಳೀಯ ಮಟ್ಟದಲ್ಲಿ ಅಥವಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿ.ಡಿ.ಒ ಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಿ ಅವರಿಗೆ ಪರಿಹಾರ ನೀಡಬೇಕು ಎಂದು ಸಚಿವರು ಜಿ ಪಂ ಸಿ.ಇ.ಓ ಗೆ ನಿರ್ದೇಶನ ನೀಡಿದರು.

Advertisement

100 ಹಾಸಿಗೆಗಳ ಆಸ್ಪತ್ರೆ: ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗುವಂತೆ ಮುಂದಿನ ಅಧಿವೇಶನದಲ್ಲಿ ಮಸೂದೆಗಳನ್ನು ಜಾರಿಗೆ ತರುತ್ತಿದ್ದೆವೆ.. ಬೆಳಗಾವಿ ನಗರದಲ್ಲಿ ಇರುವ ಇ.ಎಸ್‌.ಐ ಆಸ್ಪತ್ರೆಯು 50 ಹಾಸಿಗೆಗಳನ್ನು ಹೊಂದಿದ್ದು ಆದಷ್ಟು ಬೇಗ 100 ಹಾಸಿಗೆಯ ಆಸ್ಪತ್ರೆ ಮಾಡಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಅಕ್ಕಸಾಲಿಗರಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರಿಹಾರ ನೀಡಬೇಕು ಮತ್ತು ನೇಕಾರರಿಗೆ ಘೋಷಣೆ ಮಾಡಿರುವ 2 ಸಾವಿರ ಪರಿಹಾರ ಧನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅನಿಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next