ಬೀದರ: ಸಕ್ಕರೆ ಕಾರ್ಖಾನೆಗಳು ಮೇ ಅಂತ್ಯದೊಳಗೆ ರೈತರಿಗೆ ಕಬ್ಬಿನ ಹಣ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನ ಹಂಗಾಮಿನ ಕಬ್ಬು ಬೆಳೆದ ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಮೊತ್ತ ಪಾವತಿ ಕುರಿತು ಚರ್ಚಿಸಿದರು.
ಈ ವೇಳೆ ಮಾತನಾಡಿದ ಎಂಜಿಎಸ್‌ಎಸ್‌ಕೆ ವ್ಯವಸ್ಥಾಪಕ ನಿರ್ದೇಶಕರು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಸಾಗಿಸಿದ ರೈತರಿಗೆ ಪೂರ್ಣ ಮೊತ್ತ ಪಾವತಿಸಿದ್ದಾಗಿ ತಿಳಿಸಿದರು. ಎನ್‌ಎಸ್‌ಎಸ್‌ಕೆ ಹಾಗೂ ಬೀದರ ಕಿಸಾನ್ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿ ಮಾಡಬೇಕಾದ ಒಟ್ಟು ಮೊತ್ತದಲ್ಲಿ ಮೇ ಅಂತ್ಯದೊಳಗೆ 5 ಕೋಟಿ ರೂ. ಪಾವತಿಸುವುದಾಗಿ ತಿಳಿಸಿದರು.
ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಈ ತಿಂಗಳ ಅಂತ್ಯದವರೆಗೆ ತಮ್ಮ ಕಾರ್ಖಾನೆಯಿಂದ ಒಟ್ಟು ಮೊತ್ತದಲ್ಲಿ ಈಗ 4 ಕೋಟಿ ರೂ. ಪಾವತಿಸುವುದಾಗಿ ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ| ಮಹಾದೇವ, ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ರೈತರಿಗೆ ಪಾವತಿ ಮಾಡಬೇಕಾದ ಮೊತ್ತವನ್ನು ಬ್ಯಾಂಕ್ ಗಳಿಂದ ವ್ಯವಸ್ಥೆ ಮಾಡಿಕೊಂಡು ರೈತರಿಗೆ ಮೇ ಅಂತ್ಯದೊಳಗೆ ಪಾವತಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.
ಬರುವ ಜೂನ್ 15ರೊಳಗೆ ರೈತರ ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸುವುದಾಗಿ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಸಭೆಗೆ ತಿಳಿಸಿದರು. ಸಕ್ಕರೆ ಕಾರ್ಖಾನೆಗಳಿಗೆ ಕಾಪು ದಾಸ್ತಾನು ಮತ್ತು ಜೆಸ್ಕಾಂನಿಂದ ಬಾಕಿ ಮೊತ್ತ ಕೂಡ ಬರಬೇಕಾದ ಕಾರಣ ರೈತರಿಗೆ ಹಣ ಪಾವತಿಸಲು ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.