Advertisement

ತೆರಿಗೆ ನಿಗದಿತ ಅವಧಿಯೊಳಗೆ ಪಾವತಿಸಿ

05:07 PM Sep 29, 2018 | |

ಯಾದಗಿರಿ: ಜಿಎಸ್‌ಟಿ ಅಡಿ ಮೂಲದಲ್ಲಿ ತೆರಿಗೆ ಕಟಾವಣೆ ಮಾಡುವ ಯೋಜನೆ ಅಕ್ಟೋಬರ್‌ 1ರಿಂದ ಜಾರಿಗೆ ಬರುತ್ತಿದ್ದು, ಬಟವಾಡೆ ಅಧಿಕಾರಿಗಳು ತೆರಿಗೆ ಕಟಾಯಿಸಿ ನಿಗದಿತ ಅವಧಿಯೊಳಗೆ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಅಡಿಯಲ್ಲಿ ತೆರಿಗೆ ಕಟಾವಣೆ ಮಾಡುವ ಪ್ರಾಧಿಕಾರಿಗಳು ಹಾಗೂ ಬಟವಾಡೆ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೆರಿಗೆ ಪಾವತಿಸದಿದ್ದರೆ ಉದ್ಭವಿಸುವ ಸಮಸ್ಯೆಗಳನ್ನು ಉದಾಹರಣೆ ಸಹಿತ ವಿವರಿಸಿದ ಜಿಲ್ಲಾಧಿಕಾರಿಗಳು, ತೆರಿಗೆ ಸರಿಯಾಗಿ ಪಾವತಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಎಲ್ಲಾ ಡಿಡಿಒಗಳು ತೆರಿಗೆ, ಅಕೌಂಟಿಂಗ್‌ ಹಾಗೂ ಆಡಿಟ್‌ ಬಗ್ಗೆ ಜಾಗೃತಿ ವಹಿಸಿ ಕೆಲಸ ಮಾಡಬೇಕು. ಮೊದಲೇ ಯೋಜನೆ ರೂಪಿಸಿಕೊಂಡು ಕಾನೂನಾತ್ಮಕ ಮತ್ತು ತಾಂತ್ರಿಕವಾಗಿ ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಮೀರಾ ಪಂಡಿತ್‌ ಮಾತನಾಡಿ, ಟಿಡಿಎಸ್‌ ಮೊತ್ತವನ್ನು ಸರಕಾರಗಳಿಗೆ ತಿಂಗಳು ಮುಗಿದ ಹತ್ತು ದಿನಗಳೊಳಗಾಗಿ (ಮುಂದಿನ ತಿಂಗಳು 10ನೇ ತಾರೀಖು) ಜಿಎಸ್‌ಟಿ ನಮೂನೆ-7 ಅನ್ನು ವಿದ್ಯುನ್ಮಾನ ವಿಧಾನದಲ್ಲಿ ಸಲ್ಲಿಸುವ ಮೂಲಕ ಡಿಡಿಒ ಮತ್ತು ಮುರುಗಡೆಗೊಳಿಸುವ ಪ್ರಾಧಿಕಾರವು ಪಾವತಿಸಬೇಕು. ತಪ್ಪಿದ್ದಲ್ಲಿ ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ವಾರ್ಷಿಕ ಶೇ. 18ರಷ್ಟು ಬಡ್ಡಿ ಸಮೇತ ತೆರಿಗೆ ಮತ್ತು ದಂಡವನ್ನು ತಮ್ಮ ಸ್ವಂತ ಹಣದಿಂದ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸ್ಥಾಪಿತ ಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಗಳು, ಸೊಸೈಟಿಗಳು ಮತ್ತು ಸರಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಯಾವುದೇ ಕಾರ್ಯಗಳನ್ನು ನಿರ್ವಹಿಸಲು ಸಂಸತ್ತಿನ ಅಥವಾ ರಾಜ್ಯ ಶಾಸನ ಸಭೆಯ ಅ ನಿಧಿಯಮ ಅನ್ವಯ ಯಾವುದೇ ಸರ್ಕಾರವು ಶೇಕಡ 51ರ ಅಥವಾ ಅದಕ್ಕಿಂತ ಹೆಚ್ಚಿನ ಈಕ್ವಿಟಿ ಅಥವಾ ಹಿಡಿತದೊಂದಿಗೆ ಸ್ಥಾಪಿತವಾದ ಯಾವುದೇ ಪ್ರಾಧಿಕಾರ ಅಥವಾ ಒಂದು ಬೋರ್ಡ್‌ ಅಥವಾ ಯಾವುದೇ ಒಂದು ಸಂಸ್ಥೆಗಳು ಜಿಎಸ್‌ಟಿ ಅಡಿಯಲ್ಲಿ ಮೂಲ ತೆರಿಗೆಯನ್ನು ಶಾಸನ ಬದ್ಧವಾಗಿ ಕಟಾವಣೆ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

Advertisement

ಯಾದಗಿರಿ ಜಿಲ್ಲೆಯ ಎಲ್ಲಾ ಬಟವಾಡೆ ಅಧಿಕಾರಿಗಳು ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ಟಿಡಿಎಸ್‌ ಕಡಿತದ ಬಗ್ಗೆ ಹೆಚ್ಚಿನ ವಿವರ ಪಡೆದುಕೊಳ್ಳಲು ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿ (ರಾಯಚೂರು, ಯಾದಗಿರಿ, ಬೀದರ್‌ ಹಾಗೂ ಕಲಬುರಗಿ)ಯಲ್ಲಿ ಸಹಾಯವಾಣಿ ತೆರೆದಿದ್ದು, ಟೋಲ್‌ ಫ್ರೀ ಸಂಖ್ಯೆ: 1800-599-0051ಗೆ ಕರೆ ಮಾಡಲು ಸೂಚಿಸಿದರು.

ಸದರಿ ಕಾರ್ಯಾಗಾರದಲ್ಲಿ ಕಟಾವು ಮಾಡಿದ ತೆರಿಗೆಯನ್ನು ಖಜಾನೆ-2 ಮೂಲಕ ಸರಕಾರಕ್ಕೆ ಸಂದಾಯ ಮಾಡುವುದು ಹೇಗೆ ಎಂಬ ಬಗ್ಗೆ ಜಿಲ್ಲಾ ಖಜಾನೆ ಇಲಾಖೆ ಉಪ ನಿರ್ದೇಶಕ ಮೆಹಬೂಬೀ ಹಾಗೂ ಸಹಾಯಕ ಖಜಾನೆ ಅಧಿಕಾರಿ ಶರಣ ಬಸವರಾಜ ಮಾಹಿತಿ ನೀಡಿದರು. ಕಲಬುರಗಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ| ಎಸ್‌.ಎಂ. ಇನಾಂದಾರ್‌ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಕಲಬರುಗಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಪದ್ಮಾಕರ್‌ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಜಿ. ಅಮರೇಶ್ವರ ಇದ್ದರು.

ಶಹಾಪುರ ವಾಣಿಜ್ಯ ತೆರಿಗೆ ಅಧಿಕಾರಿ ಚಿದಾನಂದ ಎ. ದೇಶಪಾಂಡೆ, ಯಾದಗಿರಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆ ಅಧಿ ಕಾರಿಗಳಾದ ಮಹ್ಮದ್‌ ನಾಸೀರ್‌ ಮಿಯಾನ್‌ ಹಾಗೂ ಸಂಜಯ ಪಾಟೀಲ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಯಾದಗಿರಿ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಚಂದ್ರಶೇಖರ ಜಿ. ಮೇಡೆಗಾರ ನಿರೂಪಿಸಿದರು. ಕಾರ್ಯಾಗಾರದಲ್ಲಿ 300ಕ್ಕೂ ಹೆಚ್ಚು ವಿವಿಧ ಇಲಾಖೆ ಬಟವಾಡೆ ಅಧಿಕಾರಿಗಳು ಭಾಗವಹಿಸಿದ್ದರು. 

ಬಟವಾಡೆ ಅಧಿಕಾರಿಗಳ ನೋಂದಣಿ ಕಡ್ಡಾಯ
ಎಲ್ಲಾ ಬಟವಾಡೆ ಅಧಿಕಾರಿಗಳು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಧಿನಿಯಮದಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಬಟವಾಡೆ ಅಧಿಕಾರಿಗಳು ಸ್ಥಳೀಯವಾಗಿ 2.50 ಲಕ್ಷಕ್ಕಿಂತ ರೂ. ಮೇಲ್ಪಟ್ಟು ಸರಕುಗಳ ಖರೀದಿ ಅಥವಾ ಸೇವೆಗಳಿಗೆ ಹಣ ಪಾವತಿ ಮಾಡುವಾಗ ಕಡ್ಡಾಯವಾಗಿ ಶೇ. 1ರಷ್ಟು ಎಸ್‌ಜಿಎಸ್‌ಟಿ (ರಾಜ್ಯ) ಮತ್ತು ಶೇ. 1ರಷ್ಟು ಸಿಜಿಎಸ್‌ಟಿ (ಕೇಂದ್ರ) ಕಡಿತಗೊಳಿಸಬೇಕು ಹಾಗೂ ಅಂತಾರಾಜ್ಯ ಖರೀದಿ ಅಥವಾ ಸೇವೆಗಳಿಗೆ ಪಾವತಿ ಮಾಡುವಾಗ ಶೇ. 2ರಷ್ಟು ಐಜಿಎಸ್‌ಟಿ ಕಡಿತಗೊಳಿಸಿ ಸರಕಾರಕ್ಕೆ ಪಾವತಿಸಬೇಕು ಎಂದು ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಮೀರಾ ಪಂಡಿತ್‌ ತಿಳಿಸಿದರು. ಇದೇ ವೇಳೆ ವಿವಿಧ ಇಲಾಖೆ ಬಟವಾಡೆ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಧಿನಿಯಮದಡಿ ನೋಂದಣಿ, ಮೂಲದಲ್ಲಿ ತೆರಿಗೆ ಕಡಿತ, ನಮೂನೆ ಜಿಎಸ್‌ಟಿ ಆರ್‌-7 ಸಲ್ಲಿಸುವುದು, ಖಜಾನೆ – 2 ಮೂಲಕ ತೆರಿಗೆ ಪಾವತಿಸುವುದು ಮುಂತಾದವುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next