Advertisement

ಹೊರ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಸಿ

12:15 PM Oct 18, 2018 | |

ಬಸವನಬಾಗೇವಾಡಿ: ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಹೊರ ಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬ ಮಾಡಬೇಡಿ, ಅವರಿಗೆ ಸಮರ್ಪಕ ವೇತನ ನೀಡಬೇಕು ಎಂದು ಪುರಸಭೆ ಸದಸ್ಯ ಪರಶುರಾಮ ಅಡಗಿಮನಿ ಹೇಳಿದರು.

Advertisement

ಬುಧವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಜನತೆಗೆ ನಿತ್ಯ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಕಾರ್ಮಿಕರ ವೇತನ ಸೇರಿದಂತೆ ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಕೆಲಸ ಕಾರ್ಯಗಳಿಗೆ ಅಡಚನೆಯಾಗದ ರೀತಿಯಲ್ಲಿ ಮುಖ್ಯಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ಪತ್ರಕರ್ತರಿಗೆ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡುವ ಸಲುವಾಗಿ ಪತ್ರಕರ್ತರು ಹಲವಾರು ಬಾರಿ ಪುರಸಭೆಗೆ ನಿವೇಶನ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪತ್ರಕರ್ತರಿಗೆ ನಿವೇಶನ ನೀಡುವಲ್ಲಿ ಯಾಕೆ ವಿಳಂಬ ನೀತಿ ಅನುಸರಿಸುತ್ತಿದ್ದಿರಿ ಎಂದು ಕೇಳಿದಾಗ ಮುಖ್ಯಾಧಿಕಾರಿ ಬಿ.ಎ. ಸೌದಾಗಾರ ಅವರು ಈಗಾಗಲೇ ಅವರ ಮನವಿಗೆ ಅನುಗುಣವಾಗಿ ತೆಲಗಿ ರಸ್ತೆಯ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಸುಮಾರು 4ರಿಂದ 5 ಗುಂಟೆ ಜಾಗ ನೀಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಅವರ ಸಂಘಕ್ಕೆ ಆ ಜಾಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು. ಪಟ್ಟಣದಲ್ಲಿ ನೈರ್ಮಲಿಕರಣದ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಸುವ ಟೆಂಟರ್‌ ಅವಧಿಯನ್ನು
ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಆಗ ಪುರಸಭೆ ಹಿರಿಯ ಸದಸ್ಯ ನೀಲು ನಾಯಕ ಮಾತನಾಡಿ, ಪಟ್ಟಣದಲ್ಲಿ ದಿನನಿತ್ಯ ನೈರ್ಮಲಿ ಕರಣದ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಉತ್ತಮವಾಗಿರಬೇಕು. ಅವರ ಆರೋಗ್ಯದ ಬಗ್ಗೆ ಪುರಸಭೆ ಹೆಚ್ಚು ಗಮನ ಹರಿಸಬೇಕು. ಅವರಿಗೆ ಬೆಳಗಿನ ಉಪಹಾರ ಪೂರೈಸುವ ಟೆಂಟರ್‌ ಅವಧಿ ಮುಂದುವರಿಸಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಇಂದಿನ ಸಭೆ ನಡುವಳಿಕೆಗಳನ್ನು ಓದಿ ದೃಢಪಡಿಸುವುದು, ಹಿಂದಿನ ತಿಂಗಳ ಜಮಾ ಕುರಿತು ಚರ್ಚೆ ಹಾಗೂ ಜಾಹೀರಾತು ಬಿಲ್‌ ಪಾವತಿಸುವಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಯಲ್ಲೇ ಇನ್ನಿತರ ಕೆಲಸ ಕಾರ್ಯಗಳ ಬಗ್ಗೆಯೂ ಕೂಡಾ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು. ಸಭೆ ಅಧ್ಯಕ್ಷಯೆನ್ನು ಅಧ್ಯಕ್ಷೆ ಫರಿಜಾನ್‌ ಚೌಧರಿ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀದೇವಿ ಲಮಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತು ಉಕ್ಕಲಿ ಸೇರಿದಂತೆ ಅನೇಕರು ಇದ್ದರು. 

ಪುರಸಭೆ ಮುಖ್ಯಾಧಿಕಾರಿ ಬಿ.ಎಸ್‌. ಸೌದಾಗರ ಸ್ವಾಗತಿಸಿದರು. ಸಭೆಯ ಸೂಚನಾ ಪತ್ರವನ್ನು ಹಾಗೂ ವರದಿ ವಾಚನವನ್ನು ಹಿರಿಯ ಆರೋಗ್ಯ ನಿರೀಕ್ಷಕ ಸಿದ್ದಾರ್ಥ ಕಳ್ಳಿಮನಿ ಓದಿದರು. ವಿಲಾಶ ರಾಠೊಡ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next