ನವದೆಹಲಿ: ನ್ಯಾಯಾಂಗ ನಿಂದನೆ ಆರೋಪದ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ (ಆಗಸ್ಟ್ 31, 2020) ಒಂದು ರೂಪಾಯಿ ದಂಡವನ್ನು ಸೆಪ್ಟೆಂಬರ್ 15ರೊಳಗೆ ಪಾವತಿಸುವಂತೆ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಯಾಗಿರುವ ಪ್ರಶಾಂತ್ ಭೂಷಣ್ ಅವರು ಸೆಪ್ಟೆಂಬರ್ 15ರೊಳಗೆ ಒಂದು ರೂಪಾಯಿ ದಂಡ ಪಾವತಿಸಬೇಕು ಅಥವಾ ಮೂರು ತಿಂಗಳ ಜೈಲುಶಿಕ್ಷೆ ಮತ್ತು ಮೂರು ವರ್ಷಗಳ ಕಾಲ ವಕೀಲ ವೃತ್ತಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದೆ.
ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಪೀಠ ಭೂಷಣ್ ಗೆ ಶಿಕ್ಷೆಯನ್ನು ಘೋಷಿಸಿದ್ದು, ಜಸ್ಟೀಸ್ ಮಿಶ್ರಾ ಅವರು ಸೆಪ್ಟೆಂಬರ್ 2ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಣ ಎಸ್. ಎ. ಬೋಬ್ದೆ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದ ವಕೀಲ ಪ್ರಶಾಂತ್ ಭೂಷಣ್‌ರನ್ನು ಸರ್ವೋಚ್ಚ ನ್ಯಾಯಾಲಯವು “ದೋಷಿ’ ಎಂದು ಘೋಷಿಸಿತ್ತು. ಪ್ರಶಾಂತ್ ಭೂಷಣ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್, ತೀರ್ಪಿನಲ್ಲಿ ಅವರು ಮಾಡಿದ್ದ ಪ್ರಮುಖ 2 ಟ್ವೀಟ್‌ಗಳನ್ನು ನ್ಯಾಯಾಂಗ ನಿಂದನೆ ವ್ಯಾಪ್ತಿಗೊಳಪಡಿಸಿತ್ತು. ಈ ಕುರಿತು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರಶಾಂತ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.
ಮುಳುವಾದ 2 ಟ್ವೀಟ್: “ಸುಪ್ರೀಂನ ಹಿಂದಿನ 6 ಸಿಜೆಐಗಳು ಕಳೆದ 6 ವರ್ಷಗಳಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರದೆ ಪ್ರಜಾಪ್ರಭುತ್ವವನ್ನು ನಾಶ ಮಾಡಿದ್ದಾರೆ’, “ಸಿಜೆಐ ಎಸ್.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಿದ್ದಾರೆ’ ಎಂದು ಪ್ರಶಾಂತ್ ಟ್ವೀಟ್‌ನಲ್ಲಿ ನಿಂದಿ ಸಿದ್ದರು. ವಾಸ್ತವವಾಗಿ, ಸ್ಟಾಂಡ್ ಹಾಕಿದ್ದ ಬೈಕ್ ಮೇಲೆ ನ್ಯಾಣ ಬೋಬ್ದೆ ಕುಳಿತು ಫೋಟೋ ತೆಗೆಸಿಕೊಂಡಿದ್ದರು.