Advertisement

ಪ್ರತಿ ತಿಂಗಳೂ ವೇತನ ಕೊಡಿ

08:45 AM Jun 25, 2019 | Team Udayavani |

ಕಾರವಾರ: ಆರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಯಾವಾಗ ಕೇಳಿದ್ರೂ ಬಜೆಟ್ ಇಲ್ಲ. ಅನುದಾನ ಬಂದಿಲ್ಲ ಎಂದು ಕಳೆದ ಹತ್ತು ವರ್ಷಗಳಿಂದ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆ ಅಧಿಕಾರಿಗಳ ಮತ್ತು ಸರ್ಕಾರದ ಕಣ್ಣಿಗೆ ಬಿದ್ದೇ ಇಲ್ಲ ಎಂದು ಜಿಲ್ಲೆ ಆರೋಗ್ಯ ಇಲಾಖೆ ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಮೇಲ್ವಿಚಾರಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದಿದ್ದ ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಸಹಾಯಕರು ಕಾರವಾರದ ಡಿಎಚ್ಒ ಕಚೇರಿ ಹಾಗೂ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡಿದರು.

ಕಳೆದ ಹತ್ತು ವರ್ಷಗಳಿಂದ ಮನವಿ ನೀಡುತ್ತಾ ಬಂದೆವು. ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಹಾಗಾಗಿ ಈಗ ಮೊಟ್ಟ ಮೊದಲ ಬಾರಿಗೆ ಸಂಘಟನೆ ಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದೇವೆ. ಇದು ಮೊದಲ ಹಂತದ ಹೋರಾಟ. ನಮಗೆ ಪ್ರತಿ ತಿಂಗಳ 5ನೇ ತಾರಿಖೀನೊಳಗ ವೇತನ ನೀಡಲಿ. ಇದು ನಮ್ಮ ಪ್ರಧಾನ ಬೇಡಿಕೆ. ಕೆ 2 ಯುಗದಲ್ಲಿ ಇದ್ದೇವೆ. ಆದರೂ ನಮಗೆ ನಾಲ್ಕು ತಿಂಗಳಿಗೊಮ್ಮೆ. ಆರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತದೆ. ನಮ್ಮ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂದು ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷೆ ಸುಮಂಗಲಾ ಹೆಗಡೆ ಅಳಲು ತೋಡಿಕೊಂಡರು.

ನಾವು ಕೆಲಸ ಮಾಡುವುದು ಗ್ರಾಮಾಂತರ ಭಾಗದಲ್ಲಿ. ಅನುದಾನ ಕೊರತೆ ನೆಪದಲ್ಲಿ ಹಲವು ವರ್ಷಗಳಿಂದ ನಮಗೆ ಸಂಚಾರಿ ಭತ್ಯೆ ನೀಡಿಲ್ಲ ಎಂದು ಕಾರ್ಯಾಧ್ಯಕ್ಷ ನಾಗರಾಜ ಟಿ.ಹೊಸಮನಿ ಆರೋಪಿಸಿದರು.

ಆರೋಗ್ಯ ಇಲಾಖೆ ಆಧಾರ ಸ್ತಂಭವೇ ನಾವು. ರಾಜ್ಯ ಮತ್ತು ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನವನ್ನು ಶ್ರದ್ಧೆಯಿಂದ ಮಾಡುತ್ತಿದ್ದು ಸಮಾಜದ ಆರೋಗ್ಯ ಕಾಪಾಡುತ್ತಿದ್ದೇವೆ. ತಾ.ಪಂ. ಅಡಿ ಕೆಲಸ ಮಾಡುವ ನಾವು ಆರೋಗ್ಯ ಸಹಾಯಕರ ಲೆಕ್ಕ ಶೀರ್ಷಿಕೆ 20,03 ಅಡಿ ವೇತನ ನೀಡಲಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ನಾಗಯ್ಯ ಹಿರೇಮಠ ಹೇಳಿದರು.

Advertisement

ನಂತರ ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿ, ಪ್ರತಿ ತಿಂಗಳು ವೇತನ ಆಗುವಂತೆ ಅನುಕೂಲ ಮಾಡಿಕೊಡಿ ಎಂದು ವಿನಂತಿಸಲಾಯಿತು. ಅಲ್ಲದೇ ಪ್ರತಿ ತಿಂಗಳು ಚಾರ್ಜ್‌ ಅಲೋನ್ಸ್‌ ನೀಡಬೇಕು. ಪ್ರಯಾಣ ಭತ್ತೆ ನೀಡಬೇಕು. ಆರೋಗ್ಯ ಇಲಾಖೆ ಅಥವಾ ಇತರೆ ಸಭೆಗಳಲ್ಲಿ ಪದನಾಮದಂತೆ ಆರೋಗ್ಯ ಸಹಾಯಕರು ಎಂದು ಕರೆಯಬೇಕು. ಆರೋಗ್ಯ ಸಹಾಯಕರ ಸೇವಾ ಪುಸ್ತಕವನ್ನು ದ್ವಿಪ್ರತಿಯಲ್ಲಿ ನಿರ್ವಹಿಸಬೇಕು. ಪ್ರತಿ ವರ್ಷದ ಅಂತ್ಯದಲ್ಲಿ ಆಯಾ ಸಿಬ್ಬಂದಿಗೆ ಸೇವಾ ಪುಸ್ತಕ ತೋರಿಸಿ ಸಹಿ ಪಡೆದುಕೊಳ್ಳಬೇಕು. ತಾಲೂಕು ಪರಿಶೀಲನಾ ಸಭೆಗಳಲ್ಲಿ ಎಸ್‌ಡಿಸಿ ಮತ್ತು ಎಫ್‌ಡಿಸಿ ಗುಮಾಸ್ತರು ಹಾಜರಿರಲು ಸೂಚಿಸಬೇಕು. ಹೊಸದಾಗಿ ನೇಮಕವಾದ ಕಿರಿಯ ಆರೋಗ್ಯ ಸಹಾಯಕರ ವೇತನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು, ವಿಶೇಷ ಭತ್ಯೆಯನ್ನು ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕಿಯರಿಗೆ ನೀಡಬೇಕು, ಟೈಬಾಂಡ್‌ಗಳನ್ನು ಸರಿಯಾದ ಸಮಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿರ್ವಹಿಸಿ ಜಿಲ್ಲಾ ಮಟ್ಟದ ಕಚೇರಿಗೆ ಕಳುಹಿಸಬೇಕು. ಇದರಿಂದ ಬಡ್ತಿ ಮತ್ತು ಇನಕ್ರಿಮೆಂಟ್‌ಗಳು ಸರಿಯಾದ ಸಮಯದಲ್ಲಿ ಸಿಗುವಂಗತಾಗುತ್ತದೆ ಎಂದು ಕಿರಿಯ ಆರೋಗ್ಯ ಸಹಾಯಕಿಯರು ಜಿಲ್ಲಾಧಿಕಾರಿಗಳ ಗಮನಸೆಳೆದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿಲ್ಲಾ ಮಟ್ಟದಲ್ಲಿ ಬಗೆ ಹರಿಯುವ ಬೇಡಿಕೆಗಳನ್ನು ಈಡೇರಿಸಲು ಡಿಎಚ್ಒಗೆ ಸೂಚಿಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ನೂರಾರು ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಸಹಾಯಕರು, ಮೇಲ್ವಿಚಾರಕರು ಭಾಗವಹಿಸಿದ್ದರು. ಸಚಿವ ದೇಶಪಾಂಡೆ, ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ, ನಿರ್ದೇಶಕರಿಗೆ, ಜಿಪಂ ಸಿಇಒ ಮೊಹಮ್ಮದ್‌ ರೋಶನ್‌ರಿಗೆ ಮನವಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next