ರಾಣಿಬೆನ್ನೂರ: ನಗರಸಭೆ ಪೌರ ಕಾರ್ಮಿಕರಂತೆ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೂ ನಗರಸಭೆಯಿಂದ ನೇರ ವೇತನ ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೌರಾಡಳಿತ ಸಚಿವ ಆರ್. ಶಂಕರ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.
ಶನಿವಾರ ಇಲ್ಲಿನ ತಾಪಂ ಆವರಣದಲ್ಲಿ ನಗರಸಭೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನೀಡಿದ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಗಳೊಂದಿಗೆ ಮಾತನಾಡಿದರು. ಈ ಹಿಂದೆ ನಗರಸಭೆಗೆ ನೇಮಕವಾದ 15 ಪೌರ ಕಾರ್ಮಿಕರ ಬಗ್ಗೆ ಇತರರು ನೀಡಿದ ದೂರಿನ ಅನ್ವಯ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಿದರು.
ಪೌರ ಕಾರ್ಮಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಬೇಡಿಕೆ ಈಡೇರಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಿಮ್ಮ ಸಮ್ಮುಖದಲ್ಲಿಯೇ ಸೂಚನೆ ನೀಡಿರುವೆ. ಚನ್ನಪ್ಪ ನಡುವಿನಕೇರಿ ಹಾಗೂ ಶೇಖಪ್ಪ ಉಜ್ಜೇರ ನಿಧನದ ನಂತರ ಉಂಟಾಗಿರುವ ಸಮಸ್ಯೆಗೆ ಅವರ ಕುಟುಂಬ ವರ್ಗದವನ್ನು ನೇಮಕ ಮಾಡಿಕೊಳ್ಳಲು ಸೂಚಿಸಿದರು. ಜೊತೆಗೆ ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿರುವೆ ಎಂದರು.
ಸಂಘದ ಅಧ್ಯಕ್ಷ ಕರಬಸಪ್ಪ ದಾಸಪ್ಪನವರ ಮಾತನಾಡಿ, ನಗರಸಭೆಯಲ್ಲಿ 135 ಗುತ್ತಿಗೆ ಪೌರ ಕಾರ್ಮಿಕರಿದ್ದು, ಇದರಲ್ಲಿ 10ರಿಂದ 15 ವರ್ಷ ಸೇವೆ ಸಲ್ಲಿಸಿದವರೂ ಸಹ ಇದ್ದಾರೆ. ಇಂತಹ ಸಂದರ್ಭದಲ್ಲಿ ಕೇವಲ 2-3ವರ್ಷ ಸೇವೆ ಸಲ್ಲಿಸಿದ 15ಕ್ಕೂ ಅಧಿಕ ಪೌರಕಾರ್ಮಿಕರನ್ನು ನೇಮಕ ಮಾಡಿರುವುದರಲ್ಲಿ ಉಂಟಾಗಿರುವ ತಾರತಮ್ಮ ಸರಿಪಡಿಸಬೇಕು. ಇಲ್ಲವಾದರೆ ಸಾಮೂಹಿಕವಾಗಿ ವಿಷ ಸೇವಿಸುವುದಾಗಿ ಎಚ್ಚರಿಸಿದರು.
ಆಯ್ಕೆಯಲ್ಲಿ ಉಂಟಾದ ತಾರತಮ್ಯ ಸರಿಪಡಿಸಬೇಕು, ಆಯ್ಕೆಯಲ್ಲಿ ಅನೇಕ ಖೊಟ್ಟಿ ಪ್ರಮಾಣಪತ್ರ ನೀಡಿ ನೇಮಕವಾಗಿದ್ದನ್ನು ರದ್ದುಪಡಿಸಬೇಕು, ಅನ್ಯ ಜಾತಿಯವರೂ ನೇಮಕಾತಿಯಲ್ಲಿ ಆಯ್ಕೆಯಾಗಿರುವುದನ್ನು ಕೈ ಬಿಡಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸಿದಾಗ, ಇದಕ್ಕೆ ಪ್ರತಿಕ್ರಯಿಸಿದ ಸಚಿವರು, ಎಲ್ಲ 130 ಪೌರ ಕಾರ್ಮಿಕರನ್ನು ಸಮಾನರೆಂದು ಅರಿತು ಅವರೆಲ್ಲರಿಗೂ ನೇರ ವೇತನ ಪಾವತಿಗೆ ಸೂಚನೆ ನೀಡಿರುವಾಗ ಮತ್ತೇಕೆ ಈ ತಾರತಮ್ಮ ಎಂದು ಪ್ರಶ್ನಿಸಿದರು.
ಈ ಬಗ್ಗೆ ಸುಮಾರು 20ನಿಮಿಷ ನಿಂತುಕೊಂಡೇ ಪೌರ ಕಾರ್ಮಿಕರ ಅಹವಾಲು ಆಲಿಸಿದ ಸಚಿವರಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಪೌರಾಯುಕ್ತ ಡಾ| ಎನ್ ಮಹಾಂತೇಶ ಸೇರಿದಂತೆ ಹಿರಿಯ ಕಿರಿಯ ಅಧಿಕಾರಿಗಳು ಜೊತೆಗಿದ್ದು, ಸಚಿವರ ಸಲಹೆ-ಸೂಚನೆ ಪಾಲಿಸುವುದಾಗಿ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಮೈಲಪ್ಪ ದಾಸಪ್ಪನವರ, ಹನುಮಂತಪ್ಪ ಕಬ್ಟಾರ, ಹನುಮಂತಪ್ಪ ನಡುವಿನಕೇರಿ, ಮಂಜುನಾಥ ಆರಿಕಟ್ಟಿ, ಗುರುರಾಜ ಬುಳ್ಳಪ್ಪನವರ, ರವಿ ಮೆಣಸಿನಹಾಳ, ಅರುಣ ಆಡೂರು, ಎಚ್. ಕಿರಣಕುಮಾರ, ಕುಮಾರ ಗೊಲ್ಲರ, ರಾಜು ಕಡತಿ, ಶಿವಪ್ಪ ಕೊಪ್ಪದ, ಗುತ್ತೆವ್ವ, ಪರಿಮಳ, ಹೊನ್ನವ್ವ ಇದ್ದರು.