ಬೆಂಗಳೂರು: ಬಿಬಿಎಂಪಿಯ ಅರಣ್ಯ ಘಟಕದಲ್ಲಿ ಆಗದೇ ಇರುವ ಕೆಲಸಕ್ಕೆ ಹಣ ಪಾವತಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ 2016-17ನೇ ಸಾಲಿನಲ್ಲಿ ಅರಣ್ಯ ಘಟಕದ ಉಪ ನಿಯಂತ್ರಕರ ಅಡಿಯಲ್ಲಿ ಕೈಗೊಳ್ಳಲಾದ ಕಾರ್ಯಗಳಿಗೆ ಪಾಲಿಕೆಯಿಂದ 15.43 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಪ್ರಮುಖವಾಗಿ ನೆಡುತೋಪು ನಿರ್ಮಾಣ ಮತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣಾ ತಂಡದ ಪರಿಸರ ಜಾಗೃತಿ ವ್ಯಕ್ತಿಗಳಿಗೆ ಗೌರವಧನ ನೀಡುವುದು, ಮರ ಬಿದ್ದು ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಹಾಗೂ ಮರಗಳ ಸರ್ವೇ ಮತ್ತು ಸಂಖ್ಯೆ ನೀಡುವುದಕ್ಕೆ ಹಣ ಬಿಡುಗಡೆಯಾಗಿದೆ.
ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಮರಗಳ ಸರ್ವೇ ಮತ್ತು ಅವುಗಳಿಗೆ ಸಂಖ್ಯೆ ನೀಡುವ ಕಾರ್ಯಕ್ಕೆ 2016-17ನೇ ಸಾಲಿನಲ್ಲಿ 21.28 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಹಣ ಯಾರಿಗೆ ಸೇರಿತು? ಯಾವ ಕಾರಣಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆ ಅರಣ್ಯ ಘಟಕದ ಹಿರಿಯ ಅಧಿಕಾರಿಗಳಿಗೇ ಮಾಹಿತಿಯಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆಯ ಅರಣ್ಯ ವಿಭಾಗದ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಅಪ್ಪುರಾವ್, ಮರಗಳ ಸರ್ವೇ ಮತ್ತು ಸಂಖ್ಯೆ ನೀಡುವ ಕೆಲಸಕ್ಕೆ ಕೇಂದ್ರ ಕಚೇರಿಯಿಂದ ಯಾವುದೇ ಬಿಲ್ ಪಾವತಿಯಾಗಿಲ್ಲ. ವಾರ್ಡ್ ಅಥವಾ ವಲಯ ಮಟ್ಟದಲ್ಲಿ ಹಣ ಬಿಡುಗಡೆಯಾಗಿರಬೇಕು. ಸರ್ವೇ ನಡೆಸದೆಯೇ ಬಿಲ್ ಪಾವತಿಸಿರುವುದು ಸರಿಯಲ್ಲ. ಈ ಕುರಿತು ಅಧಿಕಾರಿಗಳಿಂದ ಕಡತಗಳನ್ನು ತರೆಸಿಕೊಂಡು ಪರಿಶೀಲಿಸಲಾಗುವುದು ಎಂದಿದ್ದಾರೆ.
ಕಾಮಗಾರಿ ಮುಗಿಸಿ ಹಲವಾರು ಗುತ್ತಿಗೆದಾರರು ಬಿಲ್ ಪಾವತಿ ಮಾಡುವಂತೆ ಪಾಲಿಕೆ ಸುತ್ತ ಸುತ್ತಿದ್ದಾರೆ. ಆದರೆ, ಅರಣ್ಯ ವಿಭಾಗದಲ್ಲಿ ನಡೆಸದೇ ಇರುವ ಕಾಮಗಾರಿಗೆ 2016-17ನೇ ಸಾಲಿನಲ್ಲಿ 21.28 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಯಾರಿಗೆ ಹಣ ನೀಡಲಾಗಿದೆ ಎಂಬುದರ ಕುರಿತು ತನಿಖೆ ನಡೆಯಬೇಕಿದೆ.
-ಎನ್.ಆರ್.ರಮೇಶ್, ಬಿಜೆಪಿ ನಗರ ಘಟಕದ ವಕ್ತಾರ