ನವದೆಹಲಿ: ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗಾಗಿ ಡಿಜಿಟಲ್ ಪೇಮೆಂಟ್ ವಿಧಾನಗಳನ್ನು ಬಳಸಿ ಎಂದು ಸಾರ್ವಜನಿಕರಿಗೆ ಕರೆನೀಡಿದ್ದಾರೆ.
ರಾಷ್ಟ್ರಾದ್ಯಂತ 1,100ಕ್ಕೂ ಹೆಚ್ಚು ಕೋವಿಡ್ 19 ಸೋಂಕು ಪೀಡಿತ ಪ್ರಕರಣಗಳು ವರದಿಯಾಗಿದ್ದು ಮಾತ್ರವಲ್ಲದೆ 29 ಜನರು ಈ ಮಾರಾಣಾಂತಿಕ ವೈರಸ್ ಗೆ ಬಲಿಯಾಗಿದ್ದಾರೆ. ಈ ಸೋಂಕು 3ನೇ ಹಂತಕ್ಕೂ ಕಾಲಿರಿಸಿ ಸಾಮೂದಾಯಿಕವಾಗಿ ಹರಡುವ ಭೀತಿ ಹಿನ್ನಲೆಯಲ್ಲಿ ಆರ್.ಬಿ.ಐ ಗವರ್ನರ್ ಈ ಮನವಿ ಮಾಡಿದ್ದಾರೆ.
ಸಾಮೂದಾಯಿಕವಾಗಿ ಈ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಭಾರತದಾದ್ಯಂತ 21 ದಿನಗಳ ಲಾಕ್ ಡೌನ್ ಮಾಡಿ ಆದೇಶ ಹೋರಡಿಸಿದೆ. ಮಾತ್ರವಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೂಡ ಮನವಿ ಮಾಡಿತ್ತು.
ಹೀಗಾಗಿ ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ವಿಡಿಯೋ ಸಂದೇಶ ನೀಡಿದ್ದು, ಜಗತ್ತಿನಾದ್ಯಂತ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಸೋಂಕನ್ನು ತಡೆಗಟ್ಟಲು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇದರ ಒಂದು ಪ್ರಮುಖ ಭಾಗ. ಅದಕ್ಕಾಗಿ ಯಾವುದೇ ರೀತಿಯ ಬ್ಯಾಂಕಿಂಗ್ ವಹಿವಾಟುವಿಗಾಗಿ ಮೊಬೈಲ್ ಮೂಲಕ ಡಿಜಿಟಲ್ ಪೇಮೆಂಟ್ ವಿಧಾನ ಬಳಸಿ. ‘ಪೇ ಡಿಜಿಟಲ್ ಸ್ಟೇ ಸೇಫ್’ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.