Advertisement

ಪೇ ಕಟ್ ಪ್ಲ್ಯಾನ್

03:41 PM May 11, 2020 | mahesh |

ಲಾಕ್‌ಡೌನ್‌ನಿಂದಾಗಿ, ದೇಶದ ಆರ್ಥಿಕತೆ ನಿಂತ ನೀರಾಗಿದೆ. ಉದ್ಯೋಗ ಕಡಿತ, ಸಂಬಳ ಕಡಿತದ ಸುದ್ದಿಗಳು, ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳು ನಿಜವಾಗುವ ಮುನ್ನ, ಎಂಥಾ ಪ್ರತಿಕೂಲ ಪರಿಸ್ಥಿತಿಯನ್ನಾದರೂ ಎದುರಿಸಲು, ನಾವು ಸಿದ್ಧರಿರಬೇಕು. ಅಂಥದೊಂದು ಸಿದ್ಧತೆ, ಬದುಕಿಗೆ ಧೈರ್ಯ ತುಂಬುತ್ತದೆ. ನಿರಾತಂಕದ ಜೀವನ, ಈ ಸಂದರ್ಭದಲ್ಲಿ ಅಗತ್ಯವಿದೆ. ಸಂಬಳ ಕಡಿತಗೊಂಡ ಸಮಯದಲ್ಲಿ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು, ಇಲ್ಲಿ ನೀಡುತ್ತಿದ್ದೇವೆ.

Advertisement

1 ಇ.ಎಂ.ಐ. ಮುಂದೂಡಿಕೆ
ಇಂಥಾ ಸಮಯದಲ್ಲಿ ಇಎಂಐ, ಸಾಲದ ಕಂತು ಕಟ್ಟುವುದು, ಹೊರೆಯಾಗಿ ಪರಿಣಮಿಸಬಹುದು. ಹೀಗಾಗಿ, ಮೊರಾಟೇರಿಯಂ (ಪೋಸ್ಟ್ ಫೋನ್‌ ಸವಲತ್ತು) ಆಯ್ಕೆಯನ್ನು ಆರಿಸಿಕೊಳ್ಳಬಹುದು. ಆರ್‌ಬಿಐ ಸೂಚನೆಯಂತೆ, ಬ್ಯಾಂಕುಗಳು ಈಗಾಗಲೇ ಮೂರು ತಿಂಗಳ ವಿನಾಯಿತಿ ಸವಲತ್ತನ್ನು ಗ್ರಾಹಕರಿಗೆ ಒದಗಿಸಿವೆ. ಒಂದು ವಿಚಾರವನ್ನು ಗ್ರಾಹಕರು ನೆನಪಿಡಬೇಕು. ಇದು ಇ.ಎಂ.ಐ. ಹಾಲಿಡೇ ಅಲ್ಲ. ಕಂತು ಕಟ್ಟುವುದಕ್ಕೆ ವಿನಾಯಿತಿ ನೀಡಲಾಗಿದ್ದರೂ, ತಿಂಗಳ ಬಡ್ಡಿಗೆ ವಿನಾಯಿತಿ ಇಲ್ಲ. ಅದು ಸೇರುತ್ತಾ ಹೋಗುತ್ತದೆ. ಹಾಗಿದ್ದೂ ಹಣದ ಅಗತ್ಯ, ತುರ್ತು ಇದ್ದವರಿಗೆ ಈ ಸವಲತ್ತು ಸಹಕಾರಿ.

2 ಹೂಡಿಕೆಗೆ ಅಲ್ಪವಿರಾಮ
ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಹೂಡಿಕೆ ಐಷಾರಾಮವೇ ಸರಿ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾದೆ, ಈ ಸಂದರ್ಭಕ್ಕೆ ಸರಿಹೊಂದುತ್ತದೆ. ಈ ಸಂದರ್ಭದಲ್ಲಿ, ಹೂಡಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸು ವುದರಿಂದ, ತೊಂದರೆ ಏನೂ ಒದಗಿ ಬರುವುದಿಲ್ಲ. ಆ ಹಣವನ್ನು ಮುಖ್ಯ ಸಂಗತಿಗಳಿಗೆಂದು ಮೀಸಲಿಡಬಹುದು. ಸಂಬಳ ಕಡಿತಗೊಂಡರೂ, ಅದು ತಾತ್ಕಾಲಿಕವಷ್ಟೇ. ನಾಳೆ ಮಾರುಕಟ್ಟೆ ಪ್ರಗತಿ ಕಂಡರೆ, ಕಡಿತಗೊಂಡ ಮೊತ್ತವನ್ನು ಮರುಪಾವತಿಸುವ ನಿಟ್ಟಿನಲ್ಲಿ ಸಂಸ್ಥೆಗಳು ವಿಚಾರ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ, ಕೈಯಲ್ಲಿ ಹಣ ಓಡಾಡುವ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಚೆನ್ನ.

3 ಚಿಕ್ಕ ಪುಟ್ಟ ಗುರಿ ಹಾಕಿಕೊಳ್ಳಿ
ನಮ್ಮಲ್ಲಿ ಅನೇಕರಿಗೆ, ದೀರ್ಘಾವಧಿಯ ಪ್ಲ್ಯಾನುಗಳನ್ನು ಮಾಡಿ ಅಭ್ಯಾಸ. ಅದು ನಿಜಕ್ಕೂ ಒಳ್ಳೆಯ ಅಭ್ಯಾಸವೇ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ, ಅದು ಹೊರೆಯಾಗಿ ಪರಿಣಮಿಸಬಹುದು. ಈ ಸಮಯದಲ್ಲಿ, ವರ್ಷದ ನಂತರ ಫ‌ಲ ನೀಡುವ ಯೋಜನೆಗಿಂತ, ಮುಂದಿನ ವಾರ, ಅಥವಾ ಮುಂದಿನ ತಿಂಗಳು ಉಪಯೋಗಕ್ಕೆ ಬರುವಂಥ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ. ಹೀಗಾಗಿ, ತಿಂಗಳ ಖರ್ಚು ಎಷ್ಟು ಎಂಬುದನ್ನು ಕುಳಿತು ಲೆಕ್ಕ ಮಾಡಿ. ಎಲ್ಲಾ ರೀತಿಯ ಚಿಂತನೆ ನಡೆಸುವುದಕ್ಕೆ ಇದು ಸರಿಯಾದ ಸಮಯ.

4 ಅನಗತ್ಯ ಖರ್ಚುಗಳಿಗೆ ಕತ್ತರಿ
ಯಾವುದು ಅಗತ್ಯ, ಯಾವುದು ಅನಗತ್ಯ ಎನ್ನುವುದನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಈ ಹಿಂದೆ ಅಗತ್ಯ ಎಂದು ತಿಳಿದಿದ್ದ ವೆಚ್ಚಗಳೆಲ್ಲವೂ, ಇಂದಿನ ಸಂದರ್ಭದಲ್ಲಿ ಅನಗತ್ಯ
ಎಂದು ತೋರಬಹುದು. ಹೀಗಾಗಿ, ಬಹಳ ಹಿಂದೆಯೇ ಇಂಥದ್ದೊಂದು ಪಟ್ಟಿ ತಯಾರಿಸಿಟ್ಟುಕೊಂಡಿದ್ದರೂ, ಇವತ್ತಿನ ದಿನದಲ್ಲಿ ಅದನ್ನು ಮರು ರೂಪಿಸಬೇಕಾದ ಅಗತ್ಯವಿದೆ. ಈ ದಿನಗಳಲ್ಲಿ ಕಂಫರ್ಟ್‌ ಗಿಂತಲೂ ಮೂಲಭೂತ ಸವಲತ್ತುಗಳತ್ತ ಗಮನ ಹರಿಸುವುದು ಒಳ್ಳೆಯದು.

Advertisement
Advertisement

Udayavani is now on Telegram. Click here to join our channel and stay updated with the latest news.

Next