Advertisement

ನೀರಿನ ಹಿತ ಮಿತ ಬಳಕೆಗೆ ಗಮನ ಕೊಡಿ: ದೇವರಾಜ್‌

01:40 PM Nov 06, 2021 | Team Udayavani |

ಹೊನ್ನಾಳಿ: ನೀರು ಅತ್ಯಮೂಲ್ಯ ಸಂಪತ್ತಾಗಿದ್ದು ಹಿತ ಮಿತ ಬಳಕೆಯತ್ತ ಎಲ್ಲರೂ ಗಮನ ಹರಿಸಬೇಕು ಎಂದು ಐಇಸಿ ಕೋ ಆರ್ಡಿನೇಟರ್‌ ದೇವರಾಜ್‌ ಹೇಳಿದರು.

Advertisement

ತಾಲೂಕಿನ ಕುಂದೂರು ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ನಡೆದ ಜಲಜೀವನ್‌ ಮಿಷನ್‌ ಯೋಜನೆ ಅನುಷ್ಠಾನ ಸಭೆಯಲ್ಲಿ ಅವರು ಮಾತನಾಡಿದರು. ನೀರಿನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಪಂ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಲ ಸಂರಕ್ಷಣೆಯಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ನೀರು ಪೂರೈಕೆ ಮೀಟರ್‌ ಅಳವಡಿಸಲಾಗುತ್ತಿದೆ. ಈ ಮೂಲಕ ನೀರಿನ ಮಿತ ಬಳಕೆ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲಾಗುವುದು. ಗ್ರಾಪಂ ಸದಸ್ಯರು ಕೂಡ ಜಾಗೃತಿಗೆ ಮುಂದಾಗಬೇಕು ಎಂದರು. ಕುಂದೂರು ಗ್ರಾಪಂ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿ, ಇಲ್ಲಿಯವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಗ್ರಾಪಂನಿಂದ ಪೂರೈಸಲಾಗುತ್ತಿತ್ತು. ಇದಕ್ಕೆ ಜನರೂ ಒಗ್ಗಿಕೊಂಡಿದ್ದರು. ಆದರೆ ಇದೀಗ ದಿಢೀರನೇ ನೀರು ಸರಬರಾಜು ವಿಧಾನದ ಬದಲಾವಣೆ ಬಗ್ಗೆ ಹೇಳಲಾಗುತ್ತಿದೆ. ನಲ್ಲಿಗಳಿಗೆ ಮೀಟರ್‌ ಅಳವಡಿಸುವುದು ಮತ್ತಿತರ ಕಾನೂನು ಕಟ್ಟಳೆಗಳನ್ನು ಜಾರಿಗೊಳಿಸಲು ಮುಂದಾದರೆ ಜನರು ಸುಮ್ಮನಿರುವುದಿಲ್ಲ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಾರ್ವಜನಿಕರ ಮನವೊಲಿಸುವುದು ಕಷ್ಟಕರವಾಗಬಹುದು ಎಂದು ಅಭಿಪ್ರಾಯಪಟ್ಟರು.

ನೀರು ಪೂರೈಕೆ ನೂತನ ಯೋಜನೆಯನ್ವಯ ಮನೆಗಳಿಗೆ ನಲ್ಲಿ ನೀರು ಪೂರೈಕೆ ಮಾಡಲು ನಿಯಂತ್ರಣ ವಾಲ್‌Ì ಅಳವಡಿಸಲಾಗುತ್ತದೆ. ಮನೆಗಳಿಗೆ ದಿನದ 24 ಗಂಟೆಗಳ ಕಾಲವೂ ನೀರು ಸರಬರಾಜು ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ನೀರು ಹರಿಯುವ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕಾಗಿ ಜನರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ನೀರು ಹಿಡಿಯುವ ಕೆಲಸವೊಂದನ್ನೇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹಿಂದಿನಂತೆ ನಲ್ಲಿಗಳ ಮೂಲಕ ಅಧಿಕ ಪ್ರಮಾಣದಲ್ಲಿ ನೀರು ಪೂರೈಸಬೇಕು ಎಂಬುದು ಜನರ ಆಗ್ರಹವಾಗಿದೆ ಎಂದರು.

ಕುಂದೂರು ಗ್ರಾಪಂ ಉಪಾಧ್ಯಕ್ಷೆ ರೇಖಾ ಎನ್‌.ಜಿ. ರೇವಣಸಿದ್ದಪ್ಪ, ಸದಸ್ಯರಾದ ಎಸ್‌.ಆರ್‌ .ಪ್ರಸನ್ನಕುಮಾರ್‌, ಎಸ್‌. ಧನಂಜಯ, ರಹಮತ್‌ ಉಲ್ಲಾ ಖಾನ್‌, ಸಿ. ಆಂಜನೇಯ, ಉದಯ ಕುಮಾರ್‌, ಲತಾ ಹಾಲೇಶ್‌ ಮುಡೋಳ್‌, ಮಂಜುಳಾ ಎಂ.ಪಿ. ಮಲ್ಲಿಕಾರ್ಜುನಸ್ವಾಮಿ, ರತ್ನಮ್ಮ ಕರಿಬಸಪ್ಪ, ನೇತ್ರಾವತಿ, ಕವಿತಾ, ನುಸ್ರತ್‌ ಜಬೀನಾ, ರೇಣುಕಮ್ಮ, ಸುರೇಶ್‌, ಪಿಡಿಒ ಬಿ. ಮೆಹಬೂಬ್‌, ಕಾರ್ಯದರ್ಶಿ ವೀರೇಂದ್ರ, ಕಂಪ್ಯೂಟರ್‌ ಆಪರೇಟರ್‌ ಸುಮಲತಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next