Advertisement

ಅತಿಥಿ ಉಪನ್ಯಾಸಕರಿಗೆ ವೇತನ ನೀಡಿ

05:51 AM Jun 26, 2020 | Lakshmi GovindaRaj |

ಮೈಸೂರು: ಅತಿಥಿ ಉಪನ್ಯಾಸಕರು, ಶಿಕ್ಷಕರ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಿ ಮತ್ತು ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ಅತಿಥಿ ಉಪನ್ಯಾಸಕರ, ಶಿಕ್ಷಕರ ಹೋರಾಟ ಸಮಿತಿ, ಆಲ್‌ ಇಂಡಿಯಾ ಡೆಮಾಕ್ರೆಟಿಕ್‌  ಆರ್ಗನೈಜೇಷನ್‌ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎವೈಡಿವೈಒ ರಾಜ್ಯಾಧ್ಯಕ್ಷೆ ಉಮಾದೇವಿ, ರಾಜ್ಯದಲ್ಲಿರುವ ಕಾಲೇಜುಗಳಲ್ಲಿ ಉಪನ್ಯಾಸಕರು ದುಡಿಯುತ್ತಿದ್ದಾರೆ.  ಶಿಕ್ಷಕರೇ ತಮ್ಮ ಕೈಯಿಂದಲೇ ಖರ್ಚು ಭರಿಸುತ್ತ ಆನ್‌ ಲೈನ್‌ ತರಗತಿಗಳನ್ನು ಕೂಡ ನಿಭಾಯಿಸುತ್ತಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕರೋಗದಿಂದಾಗಿ ಲಾಕ್‌ ಡೌನ್‌ ಬಂದು ಅತಿಥಿ ಉಪನ್ಯಾಸಕರ  ಸಮಸ್ಯೆ ಮತ್ತಷ್ಟು  ಉಲ್ಬಣಗೊಂಡಿದೆ. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ನೀಡುತ್ತಿರುವ ಸಂಬಳ ಸಾಕಾಗುವುದಿಲ್ಲ. ಹಿಂದಿನಿಂದಲೂ ಸರಕಾರಗಳು ವೇತನದಲ್ಲಿ ತಾರತಮ್ಯ ಮಾಡುತ್ತ ಬಂದಿವೆ. ಸರಕಾರವೇ ಖಾಸಗಿ ವಲಯಕ್ಕೆ  ಮಾದರಿಯಾಗಬೇಕು.

ಆದರೆ, ಸರಕಾರಿ ಶಾಲಾ, ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೆ ಮಾ.24ರಿಂದ ಇಲ್ಲಿಯವರೆಗೆ ಸಂಬಳ ನೀಡಿಲ್ಲ. ಲಾಕ್‌ಡೌನ್‌ ಮುಂದಿನಿಂದಲೂ ಜೀವನ ಸಂಕಷ್ಟಮಯವಾಗಿದೆ  ಎಂದರು.

ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಸೇವಾ ಭದ್ರತೆಯನ್ನು ಒದಗಿಸಿ, ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಿ, ಕೋವಿಡ್‌ 19 ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಪರಿಹಾರ  ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎವೈಡಿವೈಒ ಜಿಲ್ಲಾ ಅಧ್ಯಕ್ಷ ಹರೀಶ್‌, ಕಾರ್ಯದರ್ಶಿ ಸುನೀಲ್‌ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next