ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ವೇತನ ನಿಗದಿ ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಗುರುವಾರ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು, ನವನಗರದ ಎಲ್ಐಸಿ ಕಚೇರಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಜಿಪಂ. ಸಿಇಒ ಗಂಗೂಬಾಯಿ ಮಾನಕರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಂಚಾಲಕ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿ ಮತ್ತು ನಗರ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ಯೋಜನೆ ಅನುಷ್ಠಾನ, ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆಗೆ ಶ್ರಮಿಸುತ್ತಿದ್ದಾರೆ. ಮುಖ್ಯವಾಗಿ ಆರೋಗ್ಯ ಇಲಾಖೆಯಡಿ ಕ್ಷಯ, ಕುಷ್ಠರೋಗ, ಮಲೆರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ಸಾಂಕ್ರಾಮಿಕ ರೋಗ ತಡೆಗಟ್ಟಲು ಶ್ರಮಿಸುತ್ತಿದ್ದಾರೆ ಎಂದರು.
ಇಂತಹ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ, ಆಂಧ್ರಪ್ರದೇಶದ ಸರ್ಕಾರ 10 ಸಾವಿರ ರೂ. ಗೌರವಧನ ನಿಗದಿ ಮಾಡಿದೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ 12 ಸಾವಿರ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರು ಇಂದಿಗೂ, ಪ್ರತಿ ತಿಂಗಳ ವೇತನವಿಲ್ಲದೇ ಪರದಾಡುತ್ತಿದ್ದಾರೆ. ಕೇಂದ್ರದ ಪ್ರೋತ್ಸಾಹಧನ ನೀಡುವ ಮಾದರಿ ಆಶಾ ಸಾಫ್ಟ ವೇತನ ಮಾದರಿಯಿಂದ ಕಳೆದ ಮೂರು ವರ್ಷದಿಂದ ಸಾವಿರಾರು ರೂಪಾಯಿ ಆರ್ಥಿಕ ನಷ್ಟವಾಗಿದೆ. ಸರ್ಕಾರದ ನೂತನ ವೇತನ ಪಾವತಿ ವಿಧಾನ ಖಜಾನೆ-2ರಿಂದ ರಾಜ್ಯದ ಮಾಸಿಕ ರೂ. 3500 ಗೌರವಧನ ಹಲವಾರು ತಿಂಗಳಿಂದ ವಿಳಂಬವಾಗುತ್ತಿದೆ. ಅಲ್ಲದೇ ಕೇಂದ್ರದ ಪ್ರೋತ್ಸಾಹಧನ ಎಂಸಿಟಿಎಸ್‌ನಲ್ಲಿ ದಾಖಲಾಗದೇ ಬಾಕಿ ಉಳಿದಿದೆ. ಕಳೆದ 3-4 ವರ್ಷದಿಂದ ಹೊಸ ರೀತಿಯ ವೇತನ ವಿಧಾನ ಪದೇ ಪದೇ ಬದಲಾವಣೆ ಮಾಡುತ್ತಿದ್ದು, ಬಡ ಆಶಾಗಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಯಾವುದೇ ಹೊಸ ವಿಧಾನ ಜಾರಿಗೊಳಿಸಬೇಕಿದ್ದರೂ ಪೂರ್ವ ತಯಾರಿಯಿಂದ ಮಾಡಬೇಕು. ಆದರೆ, ವೇತನ ಪಾವತಿ ಹೊಸ ವಿಧಾನವನ್ನು ಆಶಾಗಳ ಮೇಲೆ ಪ್ರಾಯೋಗಿಕ ಜಾರಿ ಮಾಡುತ್ತಿರುವುದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ವೇತನ, ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗೆ, ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಆಶಾಗಳ ಒಟ್ಟು 14 ಬೇಡಿಕೆ ತಕ್ಷಣ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಮುಖರಾದ ಅಂಜನಾ ಕುಂಬಾರ, ಸೈನಾಜಿ ಜಂಬಗಿ, ವಿದ್ಯಾ ಕಡಕೋಳ, ಶೀಲಾ ಮೆಳ್ಳಿಗೇರಿ, ಶಾಂತಾ, ಮಮತಾಜ, ಸುರೇಖಾ ಕಾಳೆ, ಶಶಿಕಲಾ, ಗಿರಿಜಾ ಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.