ಬಾಗಲಕೋಟೆ: ಮಾಸಿಕ ಗೌರವಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘಟನೆಯ ಸೈನಾಜ್ ಝಂಗಿ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ನಿಗದಿ ಮಾಡಬೇಕು. ಅಲ್ಲದೇ ಅಗತ್ಯ ಸುರಕ್ಷಾ ಸಾಮಗ್ರಿ ವಿತರಿಸಬೇಕು. ನಮಗೆ ಪ್ರೋತ್ಸಾಹ ಧನ ಮತ್ತು ಗೌರವಧನ ಎರಡು ರೀತಿಯ ಮಿಶ್ರಣದ ವಿಚಿತ್ರ ವೇತನ ಮಾದರಿಯಲ್ಲಿ ವೇತನ ಪಾವತಿ ಮಾಡಲಾಗುತ್ತಿದೆ. ಪ್ರತಿ ಆಶಾ ಕಾರ್ಯಕರ್ತೆಗೆ ಮಾಸಿಕ ಗೌರವಧನ 4 ಸಾವಿರ ಮತ್ತು 8 ರುಟೀನ್ ವರ್ಕ್ಸ್ ಬಿಡಿ ಬಿಡಿಯಾಗಿ ಸೇರಿಸಿ 2 ಸಾವಿರ ರೂ. ವಿವಿಧ ಚಟುವಟಿಕೆಗೆ ನೀಡಲಾಗುತ್ತಿದೆ. ಇದನ್ನು ಬೇರೆ ಬೇರೆಯಾಗಿ ನೀಡುವ ಬದಲು ಒಟ್ಟಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರು, ಕೋವಿಡ್ ನಿಯಂತ್ರಣಕ್ಕಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಸರ್ಕಾರ, ಕೋವಿಡ್ ವಾರಿಯರ್ ಎಂದೂ ಗೌರವಿಸಿದೆ. ಆದರೆ, ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಮುಂತಾದ ಸುರಕ್ಷಾ ಸಾಮಗ್ರಿ ನೀಡಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಸಂಘಟನೆಯ ರೀನಾ, ಪುಷ್ಪಾ, ಸುವರ್ಣಾ, ಸಾವಿತ್ರಿ, ದಾಕ್ಷಾಯಣಿ, ಶೀಲಾ, ಶೈಲಾ, ರಾಮವ್ವ, ವಿದ್ಯಾ, ಶಕುಂತಲಾ, ಪ್ರೇಮಾ, ರೇಖಾ, ಗೀತಾ, ಭಾರತಿ, ದಿಲಶ್ಯಾದ ಇತರರಿದ್ದರು.