ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸಚಿನ್ ವಾಜೆ ಬಂಧನ, ಇದರ ಬೆನ್ನಲ್ಲೇ ಮುಂಬಯಿ ಪೊಲೀಸ್ ಆಯುಕ್ತರಾಗಿದ್ದ ಪರಂಬೀರ್ ಸಿಂಗ್‌ರನ್ನು ಶಿವಸೇನೆ ಸರಕಾರ ಎತ್ತಂಗಡಿ ಮಾಡಿದ್ದು ಸುದ್ದಿಯಾಯಿತು.
ಕೆಲವು ದಿನಗಳ ಹಿಂದೆ ಪರಂಬೀರ್ ಸಿಎಂ ಠಾಕ್ರೆಗೆ ಬಹಿರಂಗ ಪತ್ರ ಬರೆದು ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಸಚಿನ್ ವಾಜೆಯ ನಡುವೆ ಅಪವಿತ್ರ ಮೈತ್ರಿಯಿತ್ತು ಎಂದು ಆರೋಪಿಸಿ ರುವುದು ಸರಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಅನಿಲ್ ದೇಶ್‌ಮುಖ್ ಪ್ರತೀ ತಿಂಗಳೂ 100 ಕೋಟಿ ರೂಪಾಯಿ ಸಂಗ್ರಹಿಸಿ ಕೊಡಲು ಸಚಿನ್ ವಾಜೆಗೆ ಸೂಚಿಸಿದ್ದರು ಎಂದು ಪರಂಬೀರ್ ಬಾಂಬು ಸಿಡಿಸುತ್ತಿದ್ದಂತೆಯೇ, ಈಗ ಮಹಾ ಸರಕಾರದಲ್ಲಿ ಸಂಕಷ್ಟ ಆರಂಭವಾಗಿದೆ. ಹಾಗಿದ್ದರೆ ಅನಿಲ್ ದೇಶಮುಖ್ ಅಧಿಕಾರ ಕಳೆದುಕೊಳ್ಳುವರೇ? ಎನ್ನುವ ಪ್ರಶ್ನೆ ಎದುರಾಗುತ್ತಿದೆಯಾದರೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತ್ರ ಅನಿಲ್‌ರನ್ನು ಕಾಪಾಡಲು ಪ್ರಯತ್ನಿಸುತ್ತಿದ್ದಾರೆ. ಅನಿಲ್ ಕೆಳಕ್ಕೆ ಬಿದ್ದರೆ, ತಾವೂ ಶಕ್ತಿ ಕಳೆದುಕೊಳ್ಳಬೇಕಾಗುತ್ತದೆನ್ನುವುದು ಪವಾರ್ ಭಯ ಎನ್ನಲಾಗುತ್ತದೆ!
ಏಕೆಂದರೆ ಅನಿಲ್ ಸರಕಾರದಲ್ಲಿ ಎಷ್ಟು ಪ್ರಬಲರೋ, ಶರದ್ ಪವಾರ್‌ಗೆ ಅಷ್ಟು ಆಪ್ತರಾಗಿಯೂ ಗುರುತಿಸಿಕೊಂಡವರು. ಯಾವ ಮಟ್ಟಕ್ಕೆಂದರೆ ಕಳೆದ ವರ್ಷ ಅಜಿತ್ ಪವಾರ್ ಅವರು ದೇವೇಂದ್ರ ಫಡ್ನವೀಸ್‌ರೊಂದಿಗೆ ಕೈ ಜೋಡಿಸಿದ್ದಾಗ, ಎನ್‌ಸಿಪಿಯಲ್ಲಿ ಅಜಿತ್ ಜಾಗಕ್ಕೆ ಪರ್ಯಾಯವಾಗಿ ಅನಿಲ್ ದೇಶ್‌ಮುಖ್‌ರನ್ನೇ ಮುಂಚೂಣಿಯಲ್ಲಿ ನಿಲ್ಲಿಸಿದ್ದರು ಶರದ್ ಪವಾರ್. ಅಷ್ಟೇ ಅಲ್ಲ, ಶಿವಸೇನೆ ನೇತೃತ್ವದಲ್ಲಿ ಎನ್‌ಸಿಪಿ ಸರಕಾರ ರಚಿಸಲಿದೆ ಎನ್ನುವುದು ಖಾತ್ರಿಯಾದಾಗ, ಅನಿಲ್‌ರನ್ನು ಶರದ್ ಪವಾರ್ ಉಪ ಮುಖ್ಯಮಂತ್ರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಯಾವಾಗ ಅಜಿತ್ ಪವಾರ್ ಪಕ್ಷಕ್ಕೆ ಹಿಂದಿರುಗಿದರೋ, ಆಗ ಆ ಹುದ್ದೆ ಅವರಿಗೇ ಸಿಕ್ಕಿತ್ತು. ಶರದ್ ಪವಾರ್ ತಮ್ಮ ಸಂಬಂಧಿಗೆ ಮನ್ನಣೆ ನೀಡುತ್ತಿದ್ದಾರೆ ಎಂಬ ಅಪವಾದ ದೂರ ಮಾಡಿಕೊಳ್ಳಲು ಹಾಗೂ ಅಜಿತ್‌ರನ್ನು ಕಂಟ್ರೋಲ್‌ನಲ್ಲಿಡಲು ಅನಿಲ್ ದೇಶ್‌ಮುಖ್‌ರಿಗೆ ಗೃಹ ಸಚಿವ ಸ್ಥಾನ ಸಿಗುವಂತೆ ಮಾಡಿದರು. ಈ ಕಾರಣಕ್ಕಾಗಿಯೇ ಅನಿಲ್ ದೇಶ ಮುಖ್ ಶರದ್ ಪವಾರ್‌ರನ್ನು ಕೇಳದೇ ಒಂದು ಹೆಜ್ಜೆಯನ್ನೂ ಮುಂದಿಡುವುದಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಗೃಹ ಸಚಿವಾಲಯದಲ್ಲಿ ಶರದ್ ಅವರ ಮಾತು ಹೆಚ್ಚು ನಡೆಯುತ್ತಾ ಬಂದಿರುವುದೂ ಈ ಕಾರಣಕ್ಕಾಗಿಯೇ. ಈ ಸಂಗತಿ ಶಿವಸೇನೆಯ ನಾಯಕರಿಗೂ ಇರಿಸುಮುರಿಸಿಗೆ ಕಾರಣವಾಗುತ್ತಾ ಬಂದಿತ್ತು.
ಹಾಗಿದ್ದರೆ ಉದ್ಧವ್ ಅನಿಲ್ ದೇಶ್‌ಮುಖ್‌ರನ್ನು ಕೆಳಕ್ಕಿಳಿಸುತ್ತಾರಾ? ಕಾದು ನೋಡಬೇಕಿದೆ.