ಬೆಂಗಳೂರು: ಕಳೆದ ವರ್ಷದವರೆಗೆ ಬೆಂಗಳೂರು ಬುಲ್ಸ್ ತಂಡವನ್ನು ಮುನ್ನಡೆಸಿದ್ದ ಸ್ಟಾರ್ ಆಟಗಾರ ಪವನ್ ಸೆಹ್ರಾವತ್ ಇದೀಗ ತಮಿಳ್ ತಲೈವಾಸ್ ತಂಡದಲ್ಲಿದ್ದಾರೆ. ಶನಿವಾರ ಪ್ರೊ ಕಬಡ್ಡಿ ಲೀಗ್ 9ರ ಅಭಿಯಾನವನ್ನು ಆರಂಭಿಸಿದ ತಲೈವಾಸ್ ಗೆ ಮೊದಲ ದಿನವೇ ಶಾಕ್ ಎದುರಾಗಿದೆ.
ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪವನ್ ಸೆಹ್ರಾವತ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಪಂದ್ಯದ ಮೊದಲಾರ್ಧದಲ್ಲಿ ತಮಿಳು ಪಾಳಯದಲ್ಲಿ ಪವನ್ ಮತ್ತು ಸಾಹಿಲ್ ಗುಲಿಯಾ ಮಾತ್ರ ಉಳಿದಿದ್ದರು. ಈ ವೇಳೆ ಗುಜರಾತ್ ನಾಯಕ ಚಂದ್ರನ್ ರಂಜಿತ್ ರೈಡ್ ಗೆ ಬಂದರು.
ಈ ವೇಳೆ ಸಾಹಿಲ್ ಅವರು ರೈಡರ್ ಚಂದ್ರನ್ ಅವರ ದೇಹದ ಮೇಲ್ಭಾಗವನ್ನು ಹಿಡಿಯಲು ಹೋದರೆ, ಪವನ್ ಪಾದ ವನ್ನು (ಆಂಕಲ್) ಹಿಡಿಯಲು ಪ್ರಯತ್ನಿಸಿದರು. ಆದರೆ ಪ್ರಕ್ರಿಯೆಯಲ್ಲಿ ಅವರ ಮೊಣಕಾಲು ತಿರುಚಿದೆ. ಕೂಡಲೇ ಅವರು ಮ್ಯಾಟ್ ಮೇಲೆ ಬಿದ್ದರು. ಇಷ್ಟು ವರ್ಷದ ಬುಲ್ಸ್ ಗಾಗಿ ಆಡುತ್ತಿದ್ದ ಪವನ್ ನೆಲಕ್ಕೆ ಬಿದ್ದಾಗ ಕಂಠೀರವ ಕ್ರೀಡಾಂಗಣ ಸ್ಥಬ್ದವಾಯಿತು.
ಇದನ್ನೂ ಓದಿ:ಕರುನಾಡ ವನ್ಯಸಿರಿಯ ನಡುವೆ ಅಪ್ಪು ಯಾನ: ಬಿಡುಗಡೆಯಾಯ್ತು ಗಂಧದ ಗುಡಿ ಟ್ರೇಲರ್
ಪವನ್ ಗೆ ಗಂಭೀರ ಪ್ರಮಾಣದ ಗಾಯವಾಗಿದೆ ಎನ್ನಲಾಗಿದೆ. ಆದರೆ ತಮಿಳ್ ತಲೈವಾಸ್ ಕೋಚ್ ಜೆ. ಉದಯ ಕುಮಾರ್ ಅವರು ಪವನ್ ಶೀಘ್ರವಾಗಿ ಮರಳುವ ಭರವಸೆಯಲ್ಲಿದ್ದಾರೆ. “ಪವನ್ 2-3 ದಿನಗಳಲ್ಲಿ ಹಿಂತಿರುಗಬಹುದು” ಎಂದು ಅವರು ಪಂದ್ಯದ ನಂತರ ಹೇಳಿದರು. ಆದಾಗ್ಯೂ, ಪವನ್ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಬಹುದು ಎಂದು ಮೂಲಗಳು ಸೂಚಿಸಿವೆ.
ತಮಿಳ್ ತಲೈವಾಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯ 31-31ರಲ್ಲಿ ಟೈ ಆಯಿತು.