ಕಳೆದ ವಾರವಷ್ಟೇ “ಹೊಂಬಾಳೆ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ “ಧೂಮಂ’ ಬಿಡುಗಡೆಯಾಗಿದ್ದು ನಿಮಗೆ ಗೊತ್ತಿರಬಹುದು. ಆದರೆ ಸಿನಿಮಾ ಬಿಡುಗಡೆಯಾದ ನಂತರ ಅಂದುಕೊಂಡ ಮಟ್ಟಕ್ಕೆ ಪ್ರೇಕ್ಷಕರು “ಧೂಮಂ’ ಸಿನಿಮಾದತ್ತ ಮುಖ ಮಾಡಲಿಲ್ಲ. ಸಿನಿಮಾಕ್ಕೆ ವಿಮರ್ಶಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರಿಂದ ವ್ಯಕ್ತವಾಗುತ್ತಿರುವ ನಕಾರಾತ್ಮಕ ಪ್ರತಿಕ್ರಿಯೆ ಕೂಡಾ ಸಿನಿಮಾದ ಗಳಿಕೆಯ ಮೇಲೆ ಪರಿಣಾಮ ಬೀರುತ್ತಿದ್ದು, ಬಾಕ್ಸಾಫೀಸ್ ಕಲೆಕ್ಷನ್ ಕೂಡ ಇಳಿಕೆಯಾಗುತ್ತಿದೆ.
ಇನ್ನು “ಧೂಮಂ’ ಬಿಡುಗಡೆಯ ಬಳಿಕ ಕೇಳಿಬರುತ್ತಿರುವ ಸಾಕಷ್ಟು ನೆಗೆಟಿವ್ ವಿಮರ್ಶೆ ಬಗ್ಗೆ ಸ್ವತಃ ನಿರ್ದೇಶಕ ಪವನ್ ಕುಮಾರ್ ಪ್ರತಿಕ್ರಿಯಿಸಿದ್ದು, ಬೇರೆಯವರ ಅಭಿಪ್ರಾಯವನ್ನು ಪರಿಗಣಿಸದೇ ನೀವೇ ಹೋಗಿ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿರುವ ನಿರ್ದೇಶಕ ಪವನ್ ಕುಮಾರ್, “ಬಹಳ ವರ್ಷಗಳ ನಂತರ ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಬಹಳ ವ್ಯತ್ಯಾಸ ಇದೆ. ನನಗೂ ಒಂದಷ್ಟು ಫೀಡ್ ಬ್ಯಾಕ್ ಬಂತು, ಕೆಲವರು ಸಿನಿಮಾ ರನ್ನಿಂಗ್ ಟೈಮ್ ಜಾಸ್ತಿ ಎಂದರು.
ಅದು ಇದ್ದರೂ ಇರಬಹುದು. ಇಷ್ಟು ವರ್ಷಗಳ ನಂತರ ಸಿನಿಮಾ ಮಾಡಿದ್ದೀನಿ. ಆದರೆ ಈಗ ಹಿಂದೆಂದಿಗಿಂತಲೂ ವಿಮರ್ಶೆಗಳ ಹಾವಳಿ ಹೆಚ್ಚಾಗಿದೆ. ಸಿನಿಮಾ ಬಗ್ಗೆ ಯೋಚಿಸಲು ಸಮಯ ತೆಗೆದುಕೊಳ್ಳದಷ್ಟು ಆತುರದಲ್ಲಿ, ವಿಮರ್ಶೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ನೀವು ಇಷ್ಟು ಬೇಗ ನಿಮಗನ್ನಿಸಿದ್ದು ಬರೆದರೆ ಉಳಿದವರು ಸಿನಿಮಾ ನೋಡುವುದು ಕಷ್ಟವಾಗುತ್ತದೆ’ ಎಂದಿದ್ದಾರೆ.
ಇನ್ನು “ಸಿನಿಮಾ ವಿಮರ್ಶೆ ಮಾಡುವವರು ಸಿನಿಮಾ ಏನು ಎನ್ನುವುದನ್ನು ಅರ್ಥ ಕೂಡ ಮಾಡಿಕೊಳ್ಳಲು ಸಮಯ ಕೊಡುತ್ತಿಲ್ಲ’ ಎಂದಿರುವ ಪವನ್, “ಸಿನಿಮಾಕ್ಕೆ ಕೊಂಚವೂ ಅವಕಾಶ ಕೊಡದೇ ಅದರ ವಿರುದ್ಧ ವಿಮರ್ಶೆ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. ಅಂತಹವರ ಮಾತುಗಳನ್ನು ಕೇಳಬೇಡಿ, ನಿಮಗೆ ಏನು ಅನ್ನಿಸುತ್ತದೆ ಅದನ್ನು ನೀವು ನಿರ್ಣಯಿಸಿ. ಒಬ್ಬರಿಗೆ ಇಷ್ಟವಾದ ಸಿನಿಮಾ ಮತ್ತೂಬ್ಬರಿಗೆ ಇಷ್ಟವಾಗದೇ ಇರಬಹುದು. ಸಿನಿಮಾ ಟ್ರೇಲರ್, ಪೋಸ್ಟರ್ ನೋಡಿ ಚಿತ್ರ ನೋಡಲು ಹೋಗಿ, ಸೋಶಿಯಲ್ ಮೀಡಿಯಾ ವಿಮರ್ಶೆ ನೋಡಿ ನಿರ್ಧಾರಕ್ಕೆ ಬರಬೇಡಿ’ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೆ, “ಧೂಮಂ’ ಸಿನಿಮಾದಲ್ಲಿ ಮಾಲಿವುಡ್ ನಟ ಫಹಾದ್ ಫಾಸಿಲ್ ಹಾಗೂ ಅಪರ್ಣಾ ಬಾಲಮುರಳಿ, ಅಚ್ಯುತ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಏಕಕಾಲಕ್ಕೆ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ತೆರೆಕಂಡಿತು.