ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಿತ್ರಪಕ್ಷವಾದ ಟಿಡಿಪಿ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದು, ಆಂಧ್ರ ಗೃಹ ಸಚಿವೆ ಅನಿತಾಗೆ ಎಚ್ಚರಿಕೆ ನೀಡಿದ್ದಾರೆ
ಸಚಿವೆ ವಂಗಲಪುಡಿ ಅನಿತಾ ಅವರ ಕಾರ್ಯ ವೈಖರಿಯಲ್ಲಿ ಅಸಮರ್ಥತೆ ಇದ್ದು ಸುಧಾರಣೆ ಆಗದಿದ್ದಲ್ಲಿ ಗೃಹ ಇಲಾಖೆಯನ್ನೂ ನಾನೇ ಕೈಗೆತ್ತಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಳ್ಳತನ, ದರೋಡೆಯಂತಹ ಹಿಂಸಾತ್ಮಕ ಅಪರಾಧಗಳ ಆತಂಕಕಾರಿ ಹೆಚ್ಚಳದ ಕುರಿತು ಚರ್ಚಿಸುತ್ತಿರುವಾಗ ಕಲ್ಯಾಣ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
“ನಾನು ಗೃಹ ಸಚಿವಾಲಯವನ್ನು ಕೈಗೆತ್ತಿಕೊಂಡಿದ್ದರೆ, ವಿಷಯಗಳು ಸಂಪೂರ್ಣವಾಗಿ ವಿಭಿನ್ನವಾಗಿರುತ್ತಿದ್ದವು. ಬದಲಾವಣೆಗಳನ್ನು ಕಾರ್ಯಗತಗೊಳಿಸದಿದ್ದರೆ ಭವಿಷ್ಯದಲ್ಲಿ ನನ್ನ ಪಾತ್ರವನ್ನು ಪರಿಗಣಿಸಬಹುದು” ಎಂದಿದ್ದಾರೆ. “ನಾನು ಪಂಚಾಯತ್ ರಾಜ್ ಸಚಿವನಾಗಿ ನಿಮಗೆ ಹೇಳುತ್ತಿದ್ದೇನೆ, ಗೃಹ ಸಚಿವೆಯಾಗಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ. ಪರಿಸ್ಥಿತಿ ಸುಧಾರಿಸದಿದ್ದರೆ, ನಾನೇ ಗೃಹ ಸಚಿವನ ಪಾತ್ರವನ್ನು ವಹಿಸುವ ಸಮಯ ಬರಬಹುದು” ಎಂದಿದ್ದಾರೆ.
ಹಿಂದಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್, ”ಹಿಂಸಾತ್ಮಕ ಅಪರಾಧಗಳ ಹೆಚ್ಚಳಕ್ಕೆ ಅವರ ಅಧಿಕಾರ ದುರುಪಯೋಗ ಮತ್ತು ಮೃದು ಧೋರಣೆಯ ಕೆಟ್ಟ ಪರಂಪರೆ ಕಾರಣವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ವೈಫಲ್ಯ ದೊಡ್ಡ ಮಟ್ಟದಲ್ಲಿತ್ತು. ಹಿಂದಿನ ಆಡಳಿತದ ದೌರ್ಬಲ್ಯಗಳು ಅಪರಾಧಿಗಳಿಗೆ ಧೈರ್ಯ ತುಂಬಿವೆ ಮತ್ತು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಅಸುರಕ್ಷಿತ ವಾತಾವರಣಕ್ಕೆ ಕೊಡುಗೆ ನೀಡಿವೆ. ಈಗ ನಡೆಯುವ ಎಲ್ಲ ಬೆಳವಣಿಗೆಗಳು ಹಿಂದಿನ ಸರ್ಕಾರದ ಅಡಿಯಲ್ಲಿ ಬೆಳೆದ ಕೆಟ್ಟ ಮನಸ್ಥಿತಿಯ ಮುಂದುವರಿದ ಭಾಗವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.