Advertisement

ಮೂಲ ಸೌಲಭ್ಯ ಕಲ್ಪಿಸಲು ಪಾವೂರು ಗ್ರಾಮಸ್ಥರ ಆಗ್ರಹ

03:45 AM Jul 05, 2017 | Team Udayavani |

ಪಾವೂರು: ಹಕ್ಕು ಪತ್ರಕ್ಕೆ ಬಂದಿರುವ ಅರ್ಜಿ ಪರಿಶೀಲನೆ , ಬಿಪಿಎಲ್‌ ಕಾರ್ಡುಗಳ ಅರ್ಜಿ ವಿಲೇವಾರಿ, ಬಸ್‌ ಸಂಚಾರ ಮೊಟಕು ಸಹಿತ ಪಾವೂರು ಗ್ರಾಮ ಪಂಚಾಯತ್‌ನ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು  ಆಡಳಿತದ ಗಮನ ಸೆಳೆದರು. ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಜನ ಪ್ರತಿನಿಧಿಗಳು ಭರವಸೆ ನೀಡಿದರು.

Advertisement

ಪಾವೂರು ಗ್ರಾಮದಲ್ಲಿ 94ಸಿಸಿಯಡಿ ಹಕ್ಕುಪತ್ರಕ್ಕೆ 300 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 40ನ್ನು ಮಾತ್ರ ಪರಿಶೀಲಿಸಲಾಗಿದೆ. ಉಳಿದವುಗಳನ್ನು ತತ್‌ಕ್ಷಣ ಪರಿಶೀಲಿಸಬೇಕು, ಬಿಪಿಎಲ್‌ ಕಾರ್ಡುಗಳಿಗೆ 173 ಅರ್ಜಿಗಳು ಬಂದಿದ್ದು, ತತ್‌ಕ್ಷಣ ವಿಲೇವಾರಿ ಮಾಡಬೇಕು ಎಂದು ತಾ. ಪಂ.ಅಧ್ಯಕ್ಷ ಮಹಮ್ಮದ್‌ ಮೋನು ಅಧಿಕಾರಿಗಳಿಗೆ ಸೂಚಿಸಿದರು.

ಹಕ್ಕುಪತ್ರಕ್ಕೆ ಎಸ್ಸಿಎಸ್ಟಿ ಮನೆಗೆ 2,500 ಹಾಗೂ ಇತರರಿಗೆ 5,000 ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ತಾಲೂಕು ಜನಜಾಗೃತಿ ಸಮಿತಿ ಸದಸ್ಯ ಮಹಮ್ಮದ್‌ ಮಾತನಾಡಿ, ಪಾವೂರು ಗ್ರಾಮದಲ್ಲಿ ಲಾರಿಗಳು, ಲಕ್ಷಗಟ್ಟಲೆ ಮನೆ ಹೊಂದಿದವರು, ವಿದೇಶದಲ್ಲಿರುವವರಿಗೆ ಬಿಪಿಎಲ್‌ ಕಾರ್ಡುಗಳಿದ್ದು, ಒಂದೂವರೆ ಸೆಂಟ್ಸ್‌ ಜಮೀನಿನಲ್ಲಿ ಮನೆ ಹೊಂದಿರುವವರಿಗೆ ಎಪಿಎಲ್‌ ಕಾರ್ಡುಗಳಿವೆ. ಮನೆ ಬಿಟ್ಟು ಹೋದವರೂ ಬಿಪಿಎಲ್‌ ಫಲಾನುಭವಿಗಳಾಗಿದ್ದಾರೆ. ಕಡು ಬಡವರ 125 ಬಿಪಿಎಲ್‌ ಕಾರ್ಡುಗಳು ರದ್ದಾಗಿವೆ. ಈ ಹಿನ್ನೆಲೆಯಲ್ಲಿ 2010ರಿಂದ 2017ರ ವರೆಗಿನ ಬಿಪಿಎಲ್‌ ಕಾರ್ಡುಗಳ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಗಾಡಿಗದ್ದೆಗೆ ಇದ್ದ ಏಕೈಕ ಬಸ್ಸು ಇತ್ತೀಚೆಗೆ ಯಾರೋ ಕಲ್ಲು ಹೊಡೆದು ಹಾನಿ ಮಾಡಿದ ಬಳಿಕ ಮಾಯವಾಗಿದೆ. ಸರಕಾರಿ ಬಸ್‌ ಬರುವ ಬಗ್ಗೆ ಮಾತುಗಳು ಕೇಳಿ ಬಂದಿವೆಯಾದರೂ ಇದುವರೆಗೂ ಪತ್ತೆಯಿಲ್ಲ. ಇಂತಹ ಬಸ್‌ಗ ಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಗ್ರಾಮಸ್ಥ ಬಶೀರ್‌  ಆಗ್ರ ಹಿಸಿದರು.

Advertisement

ಇದಕ್ಕೆ ಉತ್ತರಿಸಿದ ಪಂ. ಅಧ್ಯಕ್ಷ ಮಹಮ್ಮದ್‌ ಫಿರೋಜ್‌, ಬಸ್ಸಿನ ಪರವಾನಿಗೆ ಪಡೆದ ಬಳಿಕ ರಸ್ತೆ ಸರಿಯಿಲ್ಲ ಎನ್ನುವ ನೆಪ ತೋರಿಸುವುದು ಅಸಮಂಜಸ. ಸಭೆಯಲ್ಲಿ ಭಾಗವಹಿಸದ ಇಲಾಖೆಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು. ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ತಾಲೂಕು ಪಂಚಾಯತ್‌, ಶಾಸಕರು ಹಾಗೂ ಪಂಚಾಯತ್‌ ಅನುದಾನ ಬಳಸಿ ಹಂತ ಹಂತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಕೃಷಿ ಇಲಾಖೆಯ ರೇಖಾ ಮಾತನಾಡಿ, 10 ಸೆಂಟ್ಸ್‌ನಿಂದ 2 ಎಕ್ರೆ ಜಮೀನು ಇರುವ ಆಸಕ್ತರಿಗೆ ಇಲಾಖೆಯಿಂದ ಉಚಿತವಾಗಿ ಕಾಳುಮೆಣಸು ಗಿಡಗಳನ್ನು ವಿತರಿಸಲಾಗುವುದು. ಇವುಗಳಿಗೆ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿದಲ್ಲಿ 15 ದಿನಗಳಿಗೊಮ್ಮೆ ತಾನೇ ಪಂಚಾಯತ್‌ಗೆ ಬಂದು ಅರ್ಜಿ ಕೊಂಡೊಯ್ಯುತ್ತೇನೆ ಎಂದರು.

ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಫಿರೋಜ್‌ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಗೀತಾ ಶಾನುಭೋಗ್‌ ನೋಡಲ್‌ ಅಧಿಕಾರಿಯಾಗಿದ್ದರು. ಕೊಣಾಜೆ  ಠಾಣೆಯ ಎಸ್‌.ಐ.ಸುಕುಮಾರ್‌, ಮೆಸ್ಕಾಂನ ಕಿರಿಯ ಅಭಿಯಂತರ ವಿನೋದ್‌ ಕುಮಾರ್‌, ಪಶು ವೈದ್ಯೆ ರೇಖಾ, ಗ್ರಾಮಕರಣಿಕ ಉಗ್ರಪ್ಪ, ಜಿ.ಪಂ. ಗ್ರಾಮೀಣಾಭಿವೃದ್ಧಿ ಎಂಜಿನಿಯರ್‌ ನಿತಿನ್‌, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖಾ ಸಿಬಂದಿ, ಮೊದಲಾದವರು ಭಾಗವಹಿಸಿದ್ದರು. ಪ್ರಭಾರ ಪಿಡಿಒ ನವೀನ್‌ ಹೆಗ್ಡೆ ಹಾಗೂ ನೂತನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅವರನ್ನು ಪಂಚಾಯತ್‌ಗೆ ಬರಮಾಡಿಕೊಳ್ಳಲಾಯಿತು. ಪಿಡಿಒ ರಜನಿ ಸ್ವಾಗತಿಸಿದರು. ಸಿಬಂದಿ ಚಿತ್ರಾ ಶೆಟ್ಟಿ ಹಿಂದಿನ ಗ್ರಾಮಸಭೆಯ ನಡಾವಳಿ ವಾಚಿಸಿದರು.

ಮಾತೃತ್ವ ಯೋಜನೆ ಮಾಹಿತಿ ಇಲ್ಲ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಪಟಗಾರ ಮಾತನಾಡಿ, ಈಗಾಗಲೇ ಅಂಗನವಾಡಿಗಳಲ್ಲಿ ಬುಧವಾರ ಮತ್ತು ಶನಿವಾರ ಮೊಟ್ಟೆಭಾಗ್ಯ ಆರಂಭಿಸಲಾಗಿದೆ, ಕ್ಷೀರಭಾಗ್ಯದಡಿ ವಾರಕ್ಕೆ ಐದು ದಿನ ಹಾಲು ನೀಡಲಾಗುವುದು. ಮಾತೃತ್ವ ಯೋಜನೆಯಡಿ ಆರು ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಸರಕಾರ ತಿಳಿಸಿದ್ದರೂ ಇಲಾಖೆಗೆ ಮಾಹಿತಿ ಬಂದಿಲ್ಲ. ಎಲ್ಲ ಯೋಜನೆಯ ಹಣ ನೇರವಾಗಿ ಖಾತೆಗೆ ವರ್ಗಾವಣೆಯಾಗುವುದರಿಂದ ಆಧಾರ್‌ ಜೋಡಣೆ ಅನಿವಾರ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next