Advertisement
ಕ್ರೀಡಾಂಗಣದ ಪೆವಿಲಿಯನ್ ಕಟ್ಟಡದ ಮೇಲ್ಫಾ ವಣಿಯ ಸಿಮೆಂಟ್, ಸ್ಲಾಬ್‌ನ ತುಂಡುಗಳು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಕ್ರೀಡಾಭ್ಯಾಸಕ್ಕೆ ಬರುವ ಕ್ರೀಡಾಪಟುಗಳ ಹೆತ್ತವರು ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಭೆ ಕರೆಯಿತು ಪೆವಿಲಿಯನ್ ಕಟ್ಟಡದ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದ್ದರು. ಹಾಗಾಗಿ ದ.ಕ. ಜಿಲ್ಲಾ ಪಂಚಾಯತ್‌ನ ಕ್ರೀಡಾಂಗಣ ನಿರ್ವಹಣಾ ಸಮಿತಿಯಿಂದ ಒಟ್ಟು 11 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಪೆವಿಲಿಯನ್‌ನ ಬಹುತೇಕ ದುರಸ್ತಿ ಕೆಲಸಗಳು ನಡೆಯಲಿದೆ. ಆ ಮೂಲಕ ಕ್ರೀಡಾಪಟುಗಳಿಗೆ ಇನ್ನೂ ಕೆಲವೇ ದಿನಗಳಲ್ಲಿ ಸುರಕ್ಷಿತ ಪೆವಿಲಿಯನ್ ಸಿಗಲಿದೆ.
ಸದ್ಯ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳು, ಕ್ರೀಡಾಳುಗಳ ಅಭ್ಯಾಸ ಪ್ರಕ್ರಿಯೆಗಳು ಎಂದಿನಂತೆ ನಡೆಯುತ್ತಿವೆ. ಆದರೆ ಅವರ ಹೆತ್ತವರು ಅಥವಾ ಇತರರು ಪೆವಿಲಿಯನ್‌ನಲ್ಲಿ ಕುಳಿತುಕೊಂಡು ಅಭ್ಯಾಸ ವೀಕ್ಷಿಸುತ್ತಾರೆ. ಕ್ರೀಡಾಂಗಣದ ಪೆವಿಲಿಯನ್ ಹಳೆ ಕಟ್ಟಡವಾದ್ದರಿಂದ ಪ್ರಸ್ತುತ ಸಿಮೆಂಟ್, ಸ್ಲಾಬ್ ತುಂಡುಗಳು ಬೀಳುತ್ತಿವೆ. ಇದಕ್ಕಾಗಿ ತಾತ್ಕಾಲಿಕ ದುರಸ್ತಿ ಕೆಲಸ ಮಾಡಲಾಗುತ್ತಿದೆ. ಈ ನಡುವೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುಮಾರು 10 ಕೋ.ರೂ. ವೆಚ್ಚದಲ್ಲಿ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಯಾಗಲಿದೆ. ಇದಕ್ಕಾಗಿ ಯೋಜನೆ ರೂಪುಗೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಯೋಜನೆ ಅಂತಿಮಗೊಳ್ಳಲಿದೆ ಎಂದು ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ತುರ್ತು ದುರಸ್ತಿ ಕಾರ್ಯ ಪ್ರಗತಿಯಲ್ಲಿ
ಮಂಗಳಾ ಕ್ರೀಡಾಂಗಣದ ಪೆೆವಿಲಿಯನ್ ಕಟ್ಟಡ ಶಿಥಿಲವಾಗಿರುವುದರಿಂದ ಅದನ್ನು ದುರಸ್ತಿ ಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಮುಂದಿನ ಹಂತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಯಾಗಲಿದೆ.
– ಪ್ರದೀಪ್ ಡಿ’ಸೋಜಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ