Advertisement

ಪಾವಂಜೆ: ಮನಪಾ ಕುಡಿಯುವ ನೀರಿನ ಪೈಪ್‌ ಒಡೆದು ನೀರು ಸೋರಿಕೆ

12:20 AM Jan 04, 2020 | mahesh |

ಹಳೆಯಂಗಡಿ: ಮಂಗಳೂರು ಮಹಾ ನಗರ ಪಾಲಿಕೆಯಿಂದ ಮೂಲ್ಕಿ -ಹಳೆಯಂಗಡಿ ವ್ಯಾಪ್ತಿಗೆ ಸರಬರಾಜು ಆಗುತ್ತಿರುವ ಕುಡಿಯುವ ನೀರಿನ ಪೈಪ್‌ ರಾಷ್ಟ್ರೀಯ ಹೆದ್ದಾರಿ ಪಾವಂಜೆಯ ಬಳಿ ಒಡೆದು ನೀರು ಪೋಲಾಗುತ್ತಿದೆ. ಸಂಬಂ ಧಿಸಿದ ಇಲಾಖೆಯ ಗಮನಕ್ಕೆ ತಂದರೂ ಸಹ ಈ ಬಗ್ಗೆ ಕ್ರಮಕೈಗೊಳ್ಳದೇ ಇರುವುದರಿಂದ ಕುಡಿಯುವ ನೀರು ವ್ಯರ್ಥವಾಗಿ ಚರಂಡಿಗೆ ಸೇರುತ್ತಿದೆ.

Advertisement

ಪಾವಂಜೆಯ ಸೇತುವೆಯ ಹಾಗೂ ಚೇಳಾರು ಕ್ರಾಸ್‌ನ ಮಧ್ಯಭಾಗದಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಈ ಪೈಪ್‌ ಒಡೆದು ಸೋರಿಕೆ ಆಗುತ್ತಿದೆ. ತುಂಬೆ ಯಿಂದ ಮೂಲ್ಕಿ ನಗರ ಪಂಚಾಯತ್‌ ಹಾಗೂ ಹಳೆ ಯಂಗಡಿಯ ಸಸಿಹಿತ್ಲು, ಪಾವಂಜೆಯ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಆಗಲು ಈ ಕಬ್ಬಿಣದ ಪೈಪ್‌ಲೈನ್‌ನ್ನು ಸುಮಾರು 15 ವರ್ಷದ ಹಿಂದೆ ಅಂದಾಜು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದರ ಉಸ್ತುವಾರಿಯನ್ನು ಮಹಾನಗರ ಪಾಲಿಕೆಯು ವಹಿಸಿಕೊಂಡಿದ್ದು, ಕುಳಾಯಿ ಪಂಪ್‌ಹೌಸ್‌ನಿಂದ ಮೂಲ್ಕಿ, ಹಳೆಯಂಗಡಿ ವ್ಯಾಪ್ತಿಗೆ ನೀರು ಹರಿಯುತ್ತಿದೆ.

ಹಳೆಯಂಗಡಿಗೆ ಮುಕ್ಕದ ಬಳಿಯಲ್ಲಿಯೇ ಪ್ರತ್ಯೇಕ ಮೀಟರ್‌ನ್ನು ಅಳವಡಿಸಿ ನೀರು ಸರಬರಾಜು ಆಗುತ್ತಿದೆ. ಅಲ್ಲಿಂದ ನೇರವಾಗಿ ಮೂಲ್ಕಿಯತ್ತ ಹರಿಯುವ ನೀರು ಪಾವಂಜೆಯಲ್ಲಿ ಪೋಲಾಗುತ್ತಿರುವುದರಿಂದ ನೀರಿನ ಒತ್ತಡವು ಸಹ ಕಡಿಮೆ ಆಗಿದೆ.

ಇದರ ಸಂಪರ್ಕವಾಗಿ ಆರು ತಿಂಗಳ ಹಿಂದೆ ನಂದಿನಿ ನದಿಯಲ್ಲಿನ ಪೈಪ್‌ಲೈನ್‌ ತುಂಡಾಗಿ ಎರಡು ತಿಂಗಳ ಹಿಂದೆಯಷ್ಟೇ ಹೊಸದಾಗಿ ಪೈಪ್‌ಲೈನ್‌ ಅಳವಡಿಸಲಾಗಿದೆ.

ಮೊದಲೇ ಗಮನಕ್ಕೆ ತರಲಾಗಿತ್ತು
ಪಾವಂಜೆ ಸೇತುವೆಯ ಕೆಳಗಡೆ ಪೈಪ್‌ಲೈನ್‌ ಅಳವಡಿಸುವಾಗಲೇ ಇಲ್ಲಿನ ಪೈಪ್‌ನಲ್ಲಿ ಬಿರುಕು ಬಿಟ್ಟಿರುವುದನ್ನು ಸ್ಥಳೀಯ ಮೂಲ್ಕಿ ನಗರ ಪಂಚಾಯನ ಪಂಪ್‌ಚಾಲಕರೊಬ್ಬರು ಮನಪಾದ ಗಮನಕ್ಕೆ ತಂದಿದ್ದರು. ಆಗ ದುರಸ್ತಿ ಮಾಡಲು ಸಹ ಸಾಕಷ್ಟು ಸಮಯಾವಕಾಶ ಇತ್ತಾದರೂ ಮಾಡಲಿಲ್ಲ, ಈಗ ಮತ್ತೆ ದುರಸ್ತಿ ಕಾರ್ಯ ನಡೆಸುವಾಗ ವಾರಗಟ್ಟಲೇ ನೀರಿನ ಸಂಪರ್ಕ ಕಡಿತಗೊಳ್ಳುವ ಮುನ್ಸೂಚನೆಯಾಗಿದೆ ಎಂದು ಸ್ಥಳೀಯರೊಬ್ಬರು ಇಲಾಖೆಯ ನಿರ್ಲಕ್ಷದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Advertisement

2016ರಲ್ಲಿ “ಉದಯವಾಣಿ’ಯ ಪಾತ್ರ
ಪಾವಂಜೆಯ ಈ ಪ್ರದೇಶದ ಬಳಿಯಲ್ಲಿಯೇ ಈ ಹಿಂದೆ ನೀರು ಸೋರಿಕೆಯಾಗಿರುವುದನ್ನು 2016ರ ಡಿ. 19ರಂದು “ಉದಯವಾಣಿ’ಯ ಸುದಿನದಲ್ಲಿ ಸಚಿತ್ರ ಲೇಖನವನ್ನು ಪ್ರಕಟಿಸಿ ಇಲಾಖೆಯನ್ನು ಎಚ್ಚರಿಸಿದ್ದರಿಂದ ಡಿ. 23ರಂದು ಮನಪಾವು ಮರೋಳಿಯ ಲೋಕೇಶ್‌ ಎಂಜಿನಿಯರ್ ಸಂಸ್ಥೆಯ ಮೂಲಕ ದುರಸ್ತಿ ಕಾರ್ಯ ನಡೆಸಿತ್ತು.

ಮಾಹಿತಿ ನೀಡಲಾಗಿದೆ
ಪಾವಂಜೆ ಬಳಿ ಮೂಲ್ಕಿಯ ಪೈಪ್‌ಲೈನ್‌ ಸಂಪರ್ಕದಲ್ಲಿ ಬಿರುಕು ಬಿಟ್ಟು ನೀರು ಪೋಲಾಗುತ್ತಿರುವುದು ಮನಪಾದ ಎಂಜಿನಿಯರಿಂಗ್‌ ವಿಭಾಗದ ಗಮನಕ್ಕೆ ತಂದಿದ್ದೇನೆ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಬೃಹತ್‌ ಮಟ್ಟದಲ್ಲಿಯೇ ದುರಸ್ತಿ ಮಾಡಬೇಕಾಗಿರುವುದರಿಂದ ನಮ್ಮಿಂದ ಅಸಾಧ್ಯವಾಗಿದೆ.
 - ಚಂದ್ರಪೂಜಾರಿ, ಮುಖ್ಯಾಧಿಕಾರಿಗಳು, ಮೂಲ್ಕಿ ನಗರ ಪಂಚಾಯತ್‌

ಹೆದ್ದಾರಿಗೆ ಕುಡಿಯುವ ನೀರು
ರಾಷ್ಟ್ರೀಯ ಹೆದ್ದಾರಿಗೆ ಕುಡಿಯುವ ನೀರು ಪೋಲಾಗುತ್ತಿರುವುದನ್ನು ಸ್ಥಳೀಯರ ಮೂಲಕ ಮನಪಾಗೆ ಮಾಹಿತಿ ನೀಡಲಾಗಿದೆ. ಕುಡಿಯುವ ನೀರು ಮುಂದಿನ ದಿನದಲ್ಲಿ ತೀವ್ರ ಅಭಾವ ಕಂಡುಬರಲಿದೆ. ಇಲ್ಲಿ ಮಾತ್ರ ಅಮೂಲ್ಯ ನೀರು ಚರಂಡಿಗೆ ಸೇರುತ್ತಿರುವುದು ವಿಷಾದನೀಯ. ಕೂಡಲೆ ಸಂಬಂ ಧಿಸಿದವರು ದುರಸ್ತಿ ಮಾಡಬೇಕು.
 - ಪವನ್‌ಕುಮಾರ್‌, ಸ್ಥಳೀಯ ಗ್ರಾಮಸ್ಥ

- ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next