ತುಮಕೂರು: ಖಾಸಗಿ ಬಸ್ ಉರುಳಿ ಆರು ಜನ ಮೃತಪಟ್ಟು 30 ಜನರು ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಭಾನುವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಘಟನೆ ಕುರಿತು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಅವರಿಂದ ಮಾಹಿತಿ ಪಡೆದರು.
ಈ ರೀತಿಯ ಘಟನೆ ಜಿಲ್ಲೆಯಲ್ಲಿ ಮರುಕಳಿಸಬಾರದು ಬಸ್ ಗಳ ಟಾಪ್ ಮೇಲೆ ಪ್ರಯಾಣಿಕರನ್ನು ಕೂರಿಸದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:ದೇಹ ಸುಡುತ್ತಿದ್ದ ಸ್ಥಿತಿಯಲ್ಲೇ ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು
ಎಲ್ಲಿ ಅಗತ್ಯವಿದೆ ಆ ಕಡೆಗಳಿಗೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು. ಒಂದೇ ಬಸ್ಸಿಗೆ ಹೆಚ್ಚಿನ ಪ್ರಯಾಣಿಕರು ಹತ್ತದಂತೆ ಗಮನ ನೀಡಬೇಕು ಎಂದು ಸೂಚಿಸಿದರು.
ಮೃತ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡಲಾಗುವುದು ಮತ್ತು ಗಾಯಗೊಂಡಿರುವರಿಗೆ ಅವರ ಚಿಕಿತ್ಸೆಯ ವೆಚ್ಚವನ್ನು ಬರಿಸಲಾಗುದು ಎಂದು ನುಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಲ್ಲಾ ಕಡೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು. ನಮ್ಮ ಡಿಪೋದಲ್ಲಿ ಬಸ್ಸುಗಳ ಲಭ್ಯವಿಲ್ಲದಿದ್ದರೆ ಬೇರೆ ಡಿಪೋದಿಂದ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗುವುದು. ಮುಂದೆ ಇಂತಹ ಘಟನೆ ಆಗದಂತೆ ಕ್ರಮವಹಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿಯ ಮುಖಂಡ ಎಸ್.ಶಿವಪ್ರಸಾದ್, ಬ್ಯಾಟರಂಗೇಗೌಡ ಮೊದಲಾದವರು ಇದ್ದರು.