ನಗರ: ಉಪ್ಪಿನಂಗಡಿ-ಪುತ್ತೂರು ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಕಬ್ಬಿನ ಹಾಲಿನ ಅಂಗಡಿ ಬಳಿ ಜ್ಯೂಸ್‌ಗೆ ಬಳಕೆ ಮಾಡುವ ಐಸ್ ಕ್ಯೂಬ್ ಅನ್ನು ನಾಯಿ, ಮಂಗಗಳು ನೆಕ್ಕುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಂಬಂಧಿತ ಆಡಳಿತ ವ್ಯವಸ್ಥೆ, ಅಂಗಡಿಯವರ ನಿರ್ಲಕ್ಷ್ಯದ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ಪ್ರಸ್ತುತ ವಿಶ್ವಾದ್ಯಂತ ವಿವಿಧ ರೀತಿಯ ಮಾರಣಾಂತಿಕ ಕಾಯಿಲೆಗಳು ಹರಡುತ್ತಿವೆ. ಇವುಗಳಿಗೆ ಮುಖ್ಯವಾಗಿ ಪ್ರಾಣಿಗಳು ಕಾರಣವಾಗುತ್ತಿವೆ. ಇದನ್ನು ಎದುರಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಬೀದಿ ಬದಿ ನಡೆಯುವ ವ್ಯಾಪಾರಗಳಲ್ಲಿ ಸ್ವತ್ಛತೆ ಸೇರಿದಂತೆ ನಿರ್ಲಕ್ಷ್ಯ ವಹಿಸಲಾಗುತ್ತಿರುವುದನ್ನು ಕಂಡೂ ಆರೋಗ್ಯ ಇಲಾಖೆ, ಆಹಾರ ಇಲಾಖೆ, ರಸ್ತೆಗೆ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸುತ್ತಿವೆ.
ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯ ಜ್ಯೂಸ್ ಮಾರಾಟದ ಅಂಗಡಿಯೊಂದರಲ್ಲಿ ನಾಯಿ ಹಾಗೂ ಮಂಗಗಳು ಮಂಜುಗಡ್ಡೆಯನ್ನೂ ನೆಕ್ಕುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಇದು ತಳ್ಳುಗಾಡಿ ಶೈಲಿಯ ಕಬ್ಬಿನ ಹಾಲು ಮಾರಾಟದ ಅಂಗಡಿಯಾಗಿದ್ದು, ಇದಕ್ಕೆ ಸ್ಥಳೀಯಾಡಳಿತದ ಪರವಾನಿಗೆ ಇದೆಯೇ ಎನ್ನುವುದು ಖಚಿತಗೊಂಡಿಲ್ಲ.
ಅಂಗಡಿಯಲ್ಲಿನ ಮಂಜುಗಡ್ಡೆ ನೀಲಿ ಬಣ್ಣದ ಟಾರ್ಪಾಲ್‌ನಲ್ಲಿ ಮಡಚಿ ನೆಲದಲ್ಲಿಯೇ ಇಡಲಾಗಿದೆ. ಆ ಟಾರ್ಪಾಲ್ ಅನ್ನು ಬಿಡಿಸಿ ನಾಯಿ ಹಾಗೂ ಮಂಗಗಳು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ನೆಕ್ಕುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಇದೇ ಮಂಜುಗಡ್ಡೆಯನ್ನು ಕಬ್ಬಿನ ಹಾಲು ತಯಾರಿಸಲು ಬಳಸಲಾಗುತ್ತಿದೆ ಎಂಬ ಗುರುತರ ಆರೋಪವನ್ನು ಸ್ಥಳೀಯ ನಿವಾಸಿಗಳು ಮಾಡುತ್ತಿದ್ದಾರೆ. ಮಂಜುಗಡ್ಡೆಯನ್ನು ಜಾಗರೂಕತೆಯಿಂದ ಸಂರಕ್ಷಿಸಬೇಕಾದ ಸ್ಟಾಲ್‌ನ ಮಾಲಕರ ಬೇಜವಾಬ್ದಾರಿ ಇಲ್ಲಿ ಪ್ರಮುಖವಾಗಿ ಕಾಣಿಸುತ್ತಿದೆ.
ಈ ಪರಿಸರದಲ್ಲಿ ಮಂಗಗಳ ಹಾವಳಿ ಅತಿಯಾಗಿದ್ದು, ಪರಿಸರದಲ್ಲಿರುವ ಜ್ಯೂಸ್, ತರಕಾರಿ ಹಾಗೂ ಹಣ್ಣುಹಂಪಲು ಮಾರಾಟದ ಅಂಗಡಿಗಳಿಗೆ ಮಂಗಗಳು ದಾಳಿ ಮಾಡುತ್ತಿರುವುದು ಮಾಮೂಲಾಗಿದೆ. ಈ ಮಧ್ಯೆಯೂ ಅಂಗಡಿಯವರ ನಿರ್ಲಕ್ಷ್ಯ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಈ ನಿರ್ಲಕ್ಷ್ಯದ ಕುರಿತು ಸಾರ್ವಜನಿಕರ ಮೂಲಕ ಸ್ಥಳೀಯಾಡಳಿತ ಗ್ರಾ.ಪಂ. ಆಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಸಂಬಂಧಪಟ್ಟ ಉಳಿದ ಇಲಾಖೆಯೂ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎನ್ನುವುದು ಸಾರ್ವಜನಿಕ ಆಗ್ರಹ.
ಅಧಿಕಾರಿಗಳು ಗಮನಹರಿಸಲಿ
ವಿವಿಧ ಮಾರಣಾಂತಿಕ ರೋಗಗಳ ಕಾರಣಕ್ಕೆ ಜನರು ಭೀತರಾಗಿದ್ದಾರೆ. ಆದರೆ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದವರು ನಿರ್ಲಕ್ಷ್ಯ ಹಾಗೂ ನಿರ್ಭೀತಿಯ ವ್ಯಾಪಾರ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.
– ದಿನಕರ ಬಂಗೇರ, ಸ್ಥಳೀಯ ನಿವಾಸಿ