Advertisement

ನೇಕಾರರ ಜೀವಾಳ ಬನಹಟ್ಟಿಹಟಗಾರ ಪತ್ತಿನ ಸಹಕಾರಿ ಸಂಘ

11:52 AM Nov 08, 2019 | Suhan S |

ಬನಹಟ್ಟಿ: ನೇಕಾರರಿಂದ, ನೇಕಾರರಿಗಾಗಿ, ನೇಕಾರರಿಗೋಸ್ಕರ ಆರಂಭಗೊಂಡ ಬನಹಟ್ಟಿ ಹಟಗಾರ ಪತ್ತಿನ ಸಹಕಾರಿ ಸಂಘ ಬೆಳ್ಳಿ  ಮಹೋತ್ಸವ ಸಂಭ್ರಮದಲ್ಲಿದೆ.

Advertisement

ಬನಹಟ್ಟಿ ನೇಕಾರಿಕೆ ಉದ್ಯೋಗದಿಂದ ಗುರುತಿಸಿಕೊಂಡಿದ್ದು, ನೇಕಾರರಿಗೆ ಮೂಲವಾಗಿ ಬೇಕಾಗಿರುವುದು ಸಕಾಲಕ್ಕೆ ಆರ್ಥಿಕ ಸಹಾಯ. ನೇಕಾರಿಕೆ ಮತ್ತು ನೇಕಾರರ ಅಭಿವೃದ್ಧಿಗೆ ಸಕಾಲದಲ್ಲಿ ಹಣಕಾಸು ನೆರವು ಪಡೆಯಲು ಹಣಕಾಸು ಸಂಸ್ಥೆ ಆರಂಭಿಸಲು ನಿರ್ಧರಿಸಿ, ಹಿರಿಯರಾದ ಗಿರಮಲ್ಲಪ್ಪ ಭದ್ರನವರ, ಕಾಡಪ್ಪ ಕಣಗೊಂಡ, ವಿರೂಪಾಕ್ಷಪ್ಪ ಹುಡೇದಮನಿ, ಗುರುಲಿಂಗಪ್ಪ ಸುಟ್ಟಟ್ಟಿ, ಮಹಾದೇವಪ್ಪ ಭದ್ರನವರ, ಎಂ.ಜಿ.ಕೆರೂರ, ಎಂ.ಎಸ್‌.ಫಕೀರಪೂರ, ವಿರೂಪಾಕ್ಷಪ್ಪ ಬಾಣಕಾರ, ರಾಮಪ್ಪ ಕುಲಗೋಡ, ನಿಂಗಪ್ಪ ಹೊನವಾಡ, ರುದ್ರಪ್ಪ ಮಂಡಿ ಮುಂದಾಳತ್ವದಲ್ಲಿ ಸಭೆ ಸೇರಿ ಬನಹಟ್ಟಿ ಹಟಗಾರ ಸಹಕಾರಿ ಪತ್ತಿನ ಸಂಘ ಆರಂಭಿಸಲು ತೀರ್ಮಾನಿಸಿದರು.

ಸಂಘ 2-2-1995 ರಂದು ಅಸ್ತಿತ್ವಕ್ಕೆ ಬಂದಿದ್ದು ,ದಿ| ಬನಹಟ್ಟಿ ಹಟಗಾರ ಸಹಕಾರಿ ಪತ್ತಿನ ಸಂಘ ನಿ. ಪ್ರಥಮ ನಿರ್ದೇಶಕ ಮಂಡಳಿ ಕೂಡಾ ಅಸ್ತಿತ್ವಕ್ಕೆ ಬಂತು. ರುದ್ರಪ್ಪ ಮಂಡಿ ಸಂಸ್ಥಾಪಕ ಅಧ್ಯಕ್ಷರಾದರೆ, ಶಂಕರ ಜುಂಜಪ್ಪನವರ, ರಾಮಪ್ಪ ಕುಲಗೋಡ, ನಿಂಗಪ್ಪ ಹೊನವಾಡ, ಸಂಗಣ್ಣ ಗಣೇಶನವರ, ದೇವೇಂದ್ರಪ್ಪ ಚನಪನ್ನವರ, ವಿರೂಪಾಕ್ಷಪ್ಪ ಕೊಕಟನೂರ, ವಿರೂಪಾಕ್ಷಪ್ಪ ಬಾಣಕಾರ, ವೀರಭದ್ರಪ್ಪ ಭದ್ರನವರ, ಸಾತಪ್ಪ ಗಸ್ತಿ ಮತ್ತು ಬಾಗವ್ವ ಚರ್ಕಿ ಸದಸ್ಯರಾದರು. ಆರಂಭದಲ್ಲಿ ಪ್ರಕಾಶ ಹೋಳಗಿ, ಸಂಜಯ ಜವಳಗಿ ಮತ್ತು ಶಂಕರ ಹನಗಂಡಿಗೆ ಅವರಿಗೆ ಸಂಘ ನಡೆಸಿಕೊಂಡು ಹೋಗುವ ಜವಾಬ್ದಾರಿ ನೀಡಲಾಯಿತು.

ಆರಂಭದಲ್ಲಿ 1095 ಶೇರುದಾರರೊಂದಿಗೆ 3,16,800 ರೂ. ಬಂಡವಾಳದೊಂದಿಗೆ ಮಂಗಳವಾರ ಪೇಟೆ ದೈವ ಮಂಡಳಿ ಕಟ್ಟಡದಲ್ಲಿ ಕಾರ್ಯ ಆರಂಭಿಸಿದ ಸಂಘ, ಕೆಲವೇ ವರ್ಷಗಳಲ್ಲಿ ಜನರ ವಿಶ್ವಾಸ ಗಳಿಸಿ ಕ್ರಮೇಣವಾಗಿ ಸಾರ್ವಜನಿಕರು ಮತ್ತು ಸಂಘದ ಸದಸ್ಯರಿಂದ ಅಪಾರ ಪ್ರಮಾಣದ ಠೇವಣಿ ಕ್ರೋಢೀಕರಿಸುತ್ತ, ಅದನ್ನು ಸದಸ್ಯರ ಅವಶ್ಯಕತೆಗೆ ತಕ್ಕಂತೆ ವ್ಯಾಪಾರ, ನೇಕಾರಿಕೆ, ವಾಹನ ಖರೀದಿ, ಮನೆ ನಿರ್ಮಾಣ, ಅಸ್ತಿ ಖರೀದಿ ಜತೆಗೆ ಬಂಗಾರ ಅಭರಣ ಮೇಲೂ ಸಾಲ ನೀಡುತ್ತ ಅಭಿವೃದ್ಧಿ ಹೊಂದಿತು. ಸಂಘದ ಸೇವೆ ಕೇವಲ ಬನಹಟ್ಟಿ ನಗರದೊಂದಿಗೆ ಬೇರೆ ಕಡೆಗೆ ವಿಸ್ತರಿಸುವ ನಿಟ್ಟಿನಲ್ಲಿ ಸಂಘದ ನಿರ್ದೇಶಕ ಮಂಡಳಿ ಚಿಂತನೆ ನಡೆಸಿ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದಲ್ಲಿ 14-11-2013ರಲ್ಲಿ ತನ್ನ ಶಾಖೆ ಆರಂಭಿಸಿತು.

ಸಂಘವು 31-3-2019ರವರೆಗೆ 2567 ಜನ ಸದಸ್ಯರು ಮತ್ತು 78,22,100 ರೂ. ಶೇರು ಬಂಡವಾಳ ಹೊಂದಿದೆ. ಲೆಕ್ಕ ಪರಿಶೋಧಕರ ವರ್ಗೀಕರಣದಲ್ಲಿ “ಎ’ ಶ್ರೇಣಿ ಹೊಂದಿದ್ದು, ತನ್ನ ಸದಸ್ಯರಿಗೆ ಪ್ರತಿವರ್ಷ ಉತ್ತಮ ಲಾಭಾಂಶ ನೀಡುತ್ತಿದೆ. ಸಂಘದ 4266 ಫಲಾನುಭವಿಗಳು 462.26 ಲಕ್ಷ ರೂ.ಗಳ ಸಾಲ ಮನ್ನಾ ಯೋಜನೆಯ ಲಾಭ ಪಡೆದಿದ್ದಾರೆ. ಸಂಘವು ಈಗ 25ನೇ ವರ್ಷ ಬೆಳ್ಳಿಹಬ್ಬದ ಮಹೋತ್ಸವ ಸಂದರ್ಭದಲ್ಲಿ ಅಂದಾಜು 36 ಲಕ್ಷ ರೂ.ವೆಚ್ಚದಲ್ಲಿ ಸಂಪೂರ್ಣ ಗಣಕೀಕೃತಕಟ್ಟಡ ಹೊಂದಿದೆ. ಅಧ್ಯಕ್ಷ ವಿರೂಪಾಕ್ಷಪ್ಪ ಕೊಕಟನೂರ, ಉಪಾಧ್ಯಕ್ಷ ವೀರಭದ್ರಪ್ಪ ಭದ್ರನವರ, ನಿರ್ದೇಶಕ ಮಂಡಳಿ ಸದಸ್ಯರಾದ ನಿಂಗಪ್ಪ ಹೊನವಾಡ, ಶಂಕರ ಜಾಲಿಗಿಡದ, ಶ್ರೀಪಾದ ಬಾಣಕಾರ, ಸಿದರಾಯಪ್ಪ ಶೀಲವಂತ, ಬಸವರಾಜ ಜಾಡಗೌಡ, ಗಂಗಪ್ಪ ಮಂಟೂರ, ಭೀಮಪ್ಪ ಕುಲಗೋಡ, ಈಶ್ವರ ಹಳಾಳ, ಪೂರ್ಣಿಮಾ ಮೋಳೆಗಾವಿ, ಹೇಮಲತಾ ಪಟ್ಟಣ, ಕಲ್ಲಪ್ಪ ಮಾದರ ಮತ್ತು ಸಂಘದ ವ್ಯವಸ್ಥಾಪಕ ಸಂಜಯ ಜವಳಗಿ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Advertisement

 

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next