Advertisement
ಈ ರಸ್ತೆಯು ಈಶ್ವರಮಂಗಲ ಹನುಮಗಿರಿ, ಗೆಜ್ಜೆಗಿರಿ ನಂದನಬಿತ್ತಿಲು ಕ್ಷೇತ್ರಕ್ಕೆ ತೆರಳುವ ಒಳ ರಸ್ತೆಯಾಗಿದೆ. ಕ್ಷೇತ್ರಕ್ಕೆ ತೆರಳುವ ಯಾತ್ರಿಕರು ಈ ಮಾರ್ಗವಾಗಿ ತೆರಳುತ್ತಿದ್ದಾರೆ. ವಿಶೇಷ ಸಂದರ್ಭದಲ್ಲಿ ಈ ರಸ್ತೆಯ ಮೂಲಕ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ರಸ್ತೆಗೆ ಹೊಂದಿಕೊಂಡೇ ಕೆರೆ ಇರುವ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಶಾಲಾ ಮಕ್ಕಳು ಇದೇ ರಸ್ತೆಯಾಗಿ ತೆರಳುತ್ತಿದ್ದು, ಜೋರಾಗಿ ಮಳೆ ಬಂದರೆ ಕೆರೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ರಸ್ತೆಯ ಒಂದು ಬದಿಯಲ್ಲಿ ಕೆರೆ ಇದ್ದು, ಇನ್ನೊಂದು ಬದಿಯಲ್ಲಿ ಹೊಳೆ ಹರಿಯುತ್ತಿರುವ ಕಾರಣ ಈ ಭಾಗ ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ಯಾವುದೇ ವಾಹನಗಳು ಸೈಡ್ ಕೊಡುವ ಹಾಗಿಲ್ಲ. ಓವರ್‌ಟೇಕ್ ಮಾಡಿದ್ದಲ್ಲಿ ವಾಹನಗಳು ಕೆರೆ ಅಥವಾ ಹೊಳೆಗೆ ಬೀಳುವುದು ನಿಶ್ಚಿತ.
ಕೆರೆಗೆ ತಾತ್ಕಾಲಿಕವಾಗಿ ಅಡಿಕೆ ಮರದ ಸಲಾಕೆಯಿಂದ ತಡೆಬೇಲಿಯನ್ನು ನಿರ್ಮಾಣ ಮಾಡಿದ್ದರೆ ಹೊಳೆ ಬದಿಗೆ ಯಾವುದೇ ತಡೆಬೇಲಿ ಇಲ್ಲ. ಕೆರೆಯ ಅಪಾಯದ ಬಗ್ಗೆ ಪರಿಚಯವೇ ಇಲ್ಲದ ವಾಹನ ಚಾಲಕರು ಈ ರಸ್ತೆಯಾಗಿ ತೆರಳಿದರೆ ಅಪಾಯ ಖಂಡಿತ. ಕೆರೆಯನ್ನು ಮುಚ್ಚುವುದು ಅಥವಾ ಅದಕ್ಕೆ ತಡೆ ಬೇಲಿ ನಿರ್ಮಾಣ ಮಾಡುವಂತೆ ಸ್ಥಳೀಯರು ಕೆಲವು ವರ್ಷಗಳಿಂದ ಸಂಬಂಧಿಸಿದ ಇಲಾಖೆಗೆ ಮನವಿಯನ್ನು ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ನೀರು ತುಂಬಿದ ಕೆರೆಗಳಿಂದ ಕೆಲವು ಕಡೆಗಳಲ್ಲಿ ಅನಾಹುತಗಳು ಉಂಟಾಗುತ್ತಿದೆ. ಪಟ್ಟೆಯಿಂದ ಮುಳಿತ್ತಡಿಗೆ ತೆರಳುವ ಒಳರಸ್ತೆಯಾದರೂ ಪ್ರಸಿದ್ಧ ಕ್ಷೇತ್ರಗಳಿಗೆ ತೆರಳುವ ಸಂಪರ್ಕ ರಸ್ತೆಯಾಗಿರುವ ಕಾರಣ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಡೆಬೇಲಿ ನಿರ್ಮಿಸಿ
ಕೆರೆ ಮತ್ತು ಹೊಳೆ ಎರಡೂ ಒಂದೇ ಕಡೆ ಇರುವ ಕಾರಣ ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ. ಮಕ್ಕಳು ಶಾಲೆಗೆ ತೆರಳುವಾಗಲೂ ಅಪಾಯವಾಗಿದೆ. ಕೆರೆಗೆ ಮತ್ತು ಹೊಳೆಗೆ ತಡೆಬೇಲಿ ಅಥವಾ ತಡೆಗೋಡೆಯನ್ನು ನಿರ್ಮಿಸಿ ಅಪಾಯವನ್ನು ತಪ್ಪಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯಿಂದ ತುರ್ತಾಗಿ ನಡೆಸಬೇಕು.
– ವೈ.ಕೆ. ನಾಯ್ಕ, ಪಟ್ಟೆ, ಸ್ಥಳೀಯರು
ನಿರ್ಣಯ ಮಾಡಿ ಕಳುಹಿಸಿದ್ದೇವೆ
ಕೆರೆ ಮುಚ್ಚಬೇಕು, ತಡೆಗೋಡೆ ನಿರ್ಮಿಸಬೇಕು ಅಥವಾ ಪರ್ಯಾಯ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ ಇತ್ತೀಚೆಗೆ ನಡೆದ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ, ಜಿ.ಪಂ. ಎಂಜಿನಿಯರಿಂಗ್ ಇಲಾಖೆ ಹಾಗೂ ಇತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಪ್ರಯಾಣಿಕರ ಹಾಗೂ ಪಾದಚಾರಿಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾ.ಪಂ. ಬದ್ಧವಾಗಿದೆ.
– ವಾಸೀಂ ಗಂಧದ ಪಿಡಿಒ
– ವಾಸೀಂ ಗಂಧದ ಪಿಡಿಒ
Related Articles
Advertisement