Advertisement

ಪಟ್ಟೆ-ಈಶ್ವರಮಂಗಲ ರಸ್ತೆ: ನಡೆಯಲೂ ಕಷ್ಟ

10:45 AM Dec 10, 2018 | Team Udayavani |

ಬಡಗನ್ನೂರು: ಪಟ್ಟೆ-ಈಶ್ವರಮಂಗಲ ಜಿ.ಪಂ. ರಸ್ತೆಯ ಪಟ್ಟೆಯಿಂದ ನೇರೋಳ್ತಡ್ಕ, ಮೂಲೆಗದ್ದೆ ತನಕದ ಸುಮಾರು 3 ಕಿ.ಮೀ. ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ಕೆಲವು ಕಡೆಗಳಲ್ಲಿ ನಡೆದುಕೊಂಡು ಹೋಗಲೂ ಸಾಧ್ಯವಾಗದಷ್ಟು ರಸ್ತೆ ಹಾಳಾಗಿದೆ. ಪಟ್ಟೆ ಈಶ್ವರಮಂಗಲ ಸಂಪರ್ಕ ರಸ್ತೆಯೇ ಹನುಮಗಿರಿ ಕ್ಷೇತ್ರ ಹಾಗೂ ಕೋಟಿ-ಚೆನ್ನಯ, ದೇಯಿ ಬೈದ್ಯೆತಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲ್‌ ಕ್ಷೇತ್ರಕ್ಕೆ ದಾರಿ.

Advertisement

ಅರ್ಧ ರಸ್ತೆ ಬಾಕಿ
ಪಟ್ಟೆಯಿಂದ ಈಶ್ವರಮಂಗಲ ರಸ್ತೆ 6 ಕಿ.ಮೀ. ಇದೆ. ಪಟ್ಟೆಯಿಂದ 1.50 ಕಿ.ಮೀ. ರಸ್ತೆಯನ್ನು 15 ವರ್ಷಗಳ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ಡಾಮರು ಹಾಕಲಾಗಿದ್ದು, ಉಳಿದ ಭಾಗಕ್ಕೆ 5 ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಇದೀಗ ಪಟ್ಟೆಯಿಂದ 3 ಕಿ.ಮೀ. ರಸ್ತೆ ಡಾಮರು ಕಿತ್ತುಹೋಗಿ ಹದೆಗೆಟ್ಟಿದೆ. ರಸ್ತೆ ನಿರ್ವಹಣೆ ಮಾಡುವವರು ಮೂಲೆಗದ್ದೆಯಿಂದ ಈಶ್ವರಮಂಗಲ ತನಕ 6 ತಿಂಗಳ ಹಿಂದೆ ತೇಪೆ ಕಾರ್ಯ ನಡೆಸಿದ್ದಾರೆ. ಉಳಿದ ಭಾಗ ಅತ್ಯಂತ ಹದೆಗಟ್ಟಿದೆ. 

ಜಲ್ಲಿಕಲ್ಲುಗಳು ಮೇಲೆದ್ದಿವೆ
ಕುದ್ರೆಮಜಲು, ಶರವು, ನೇರೋಳ್ತಡ್ಕ, ಮೂಲೆಗದ್ದೆಗಳಲ್ಲಿ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಮಾತ್ರ ಕಾಣಿಸುತ್ತಿವೆ. ನೇರೋಳ್ತಡ್ಕ ಕಾಲನಿ ಭಾಗದವರ ಸಹಿತ ನೂರಾರು ಕುಟುಂಬಗಳು ಸಾರಿಗೆ ವ್ಯವಸ್ಥೆಗೆ ಈ ರಸ್ತೆಯನ್ನೇ ಅವಲಂಬಿಸಿವೆ. ಶಾಲಾ-ಕಾಲೇಜು ಮಕ್ಕಳಿಗೂ ಸಂಚಾರ ಸವಾಲೆನಿಸಿದೆ. ರಸ್ತೆ ಸರಿ ಇಲ್ಲದೇ ಆಟೋ ರಿಕ್ಷಾಗಳ ಸಹಿತ ಬೇರೆ ವಾಹನಗಳ ಚಾಲಕರು ಬಾಡಿಗೆಗೆ ಬರಲು ನಿರಾಕರಿಸುತ್ತಾರೆ.

ಅಲ್ಲಲ್ಲಿ ತಿರುವು, ಅಗಲ ಕಿರಿದು
ಪಟ್ಟೆಯಿಂದ ರಸ್ತೆಯ ಅಗಲವೂ ಕಿರಿದಾಗಿದೆ. ಎದುರು ಬದುರಾಗಿ ವಾಹನಗಳು ಬಂದರೆ ಕಷ್ಟ. ಅಲ್ಲಲ್ಲಿ ತಿರುವು, ಕೆರೆ-ಹೊಳೆಯ ಮಧ್ಯೆ ಸಂಚಾರದ ಸ್ಥಿತಿ ಇದೆ. ಇದಕ್ಕೂ ಮಿಗಿಲಾಗಿ ಅಲ್ಲಲ್ಲಿ ಹೊಂಡ-ಗುಂಡಿಗಳಿಂದ ಕೂಡಿದೆ.

3.50 ಲಕ್ಷ ರೂ. ಅನುದಾನ
ಜಿ.ಪಂ.ನಿಂದ ಸಣ್ಣ ಪ್ರಮಾಣದ ಅನುದಾನವಷ್ಟೇ ಲಭಿಸುವುದರಿಂದ ರಸ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿಲ್ಲ. ಪಟ್ಟೆ -ಈಶ್ವರಮಂಗಲ ರಸ್ತೆಯಲ್ಲೂ ಅರ್ಧ ಕಾಮಗಾರಿ ಬಾಕಿಯಾಗಿದೆ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಾಗಿ 3.50 ಲಕ್ಷ ರೂ. ಅನುದಾನ ಇರಿಸಲಾಗಿದೆ. ಇನ್ನಷ್ಟು ಅನುದಾನಕ್ಕಾಗಿ ಶಾಸಕರು, ಸಂಸದರಲ್ಲಿ ವಿನಂತಿಸಲಾಗುವುದು.
-ಅನಿತಾ ಹೇಮನಾಥ ಶೆಟ್ಟಿ,
ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರು

Advertisement

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next