Advertisement

ಬಾಗಿಲಲ್ಲೇ ಭಾಗೀರಥಿ; ಬದಲಾಗದ ಬರ ಸ್ಥಿತಿ ! ಪಟ್ಟಣ ಪಂಚಾಯತ್‌ಗೆ ಇಚ್ಛಾಶಕ್ತಿ ಕೊರತೆ

02:30 AM Apr 16, 2021 | Team Udayavani |

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಇಚ್ಛಾಶಕ್ತಿಯ ಕೊರತೆ ಎಷ್ಟರ ಮಟ್ಟಿಗೆ ಇದೆಯೆಂದರೆ, ಬಾಗಿಲಲ್ಲೇ ಭಾಗೀರಥಿ ಇದ್ದರೂ ಊರಿನ ಬರ ನಿವಾರಿಸಲು ಸಾಧ್ಯ ವಾಗಿಲ್ಲ. ನದಿಯಂಥ ಜಲ ಮೂಲಗಳಿದ್ದರೂ ವ್ಯವಸ್ಥಿತ ಕಾರ್ಯ ಯೋಜನೆ ಹಾಗೂ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವ ಇರಾದೆಯ ಕೊರತೆಯಿಂದ ನೀರು ಪೂರೈಸಲಾಗುತ್ತಿಲ್ಲ ಎನ್ನುವುದು ವಾಸ್ತವ. ವಿಪರ್ಯಾಸದ ಸಂಗತಿಯೆಂದರೆ ಪಂಚಾಯತ್‌ ಅಧಿಕಾರಿಗಳಲ್ಲಿ ಹಿಂದಿನ ಪೈಪ್‌ಲೈನ್‌ನ ನೀಲ ನಕ್ಷೆಯೇ ಇಲ್ಲವಂತೆ. ಇದರರ್ಥ ಎಲ್ಲಾದರೂ ಪೈಪ್‌ಲೈನ್‌ ಒಡೆದು ಹಾಳಾದರೆ, ಗುದ್ದಲಿ ಹಿಡಿದುಕೊಂಡು ಹುಡುಕಲು ಹೊರಡಬೇಕು. ಜನಪ್ರತಿನಿಧಿಗಳು ಈ ಎಲ್ಲ ಸಮಸ್ಯೆಗಳತ್ತ ಇನ್ನಾದರೂ ಗಮನಿಸಬೇಕಿದೆ.

Advertisement

ಕೋಟ: ಬೇಸಗೆಯಲ್ಲಿ ಕುಡಿಯುವ ನೀರಿಗೆ ಹರಸಾಹಸ ಪಡುವ ಗ್ರಾಮಗಳು ಸಾಕಷ್ಟಿವೆ. ಅದಕ್ಕೆ ನಮ್ಮ ಪಟ್ಟಣ ಪಂಚಾಯತ್‌ ಸಹ ಅಪವಾದವಲ್ಲ. ಇಲ್ಲಿಯೂ ಬೇಸಗೆ ಬಂತೆಂದರೆ, ನೀರಿನ ಕೊರತೆಯ ತಲೆನೋವು ಆರಂಭವಾಗುತ್ತದೆ.

ಗುಂಡ್ಮಿ, ಪಾರಂಪಳ್ಳಿಯಲ್ಲಿ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ವರ್ಷವಿಡೀ ನೀರು ಪೂರೈಕೆಯಾಗ ಬೇಕು. ಯಕ್ಷಿಮಠ, ಅಲಿತೋಟ, ಚುಂಚ್‌ಮನೆ, ಹೊಳ್ಳರ ತೋಟ, ಮಧ್ಯಸ್ಥರ ತೋಟ, ಶಾಲಾ ತೋಟ, ತೋಡ್ಕಟ್ಟು, ಕೆಮ್ಮಣ್ಣುಕೆರೆ, ಕಾರ್ಕಡ ಸೌರಿಬೈಲು, ಭಟ್ರಕಟ್ಟೆ, ಬೆಟ್ಲಕ್ಕಿ, ಹೊಳೆಕೆರೆ ಪ್ರದೇಶಗಳಲ್ಲೂ ಸಮಸ್ಯೆ ಹೆಚ್ಚಿದೆ. ಪ್ರಸ್ತುತ ಪ್ರತಿ ಮಾರ್ಚ್‌ನಿಂದ ಜೂನ್‌ವರೆಗೆ ಇಲ್ಲಿ ಎಲ್ಲೆಡೆಯೂ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಬೇಸಗೆ ಅಂತ್ಯದಲ್ಲಿ ಇದೂ ಇಲ್ಲ. ಉಳಿದಂತೆ ಜೂನ್‌ನಿಂದ ಫೆಬ್ರವರಿವರೆಗೆ ಗಂಟೆಗೆ ಎರಡು ಗಂಟೆ ನೀರು ಪೂರೈಸಲಾಗುತ್ತದೆ.

ಒಟ್ಟು 3,544 ಮನೆಗಳ ಪೈಕಿ ಪ.ಪಂ.ನಿಂದ ನಳ್ಳಿ ಸಂಪರ್ಕ ಪಡೆದಿರುವುದು ಕೇವಲ 417 ಮನೆಗಳು ಮಾತ್ರ. ನೀರಿನ ಬೇಡಿಕೆ 8.9. ಎಂ.ಸಿ.ಎಫ್‌.ಟಿ. ಮಾತ್ರ. ಅದನ್ನೂ ಪ. ಪಂಚಾಯತ್‌ಗೆ ತನ್ನ ವ್ಯಾಪ್ತಿಯ 8 ಸರಕಾರಿ ಬಾವಿಗಳಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮಸ್ಯೆ ಹೆಚ್ಚುತ್ತಲೇ ಇದೆ.

ಬಾಗಿಲಲ್ಲೇ ಭಾಗೀರಥಿ
ಪ.ಪಂ.ನ ಗಡಿಭಾಗವಾದ ಬನ್ನಾಡಿ-ಕಾರ್ಕಡ ಪ್ರದೇಶದಲ್ಲಿ ವರ್ಷವಿಡೀ ತುಂಬಿ ಹರಿಯುವ ಬನ್ನಾಡಿ ದೊಡ್ಡ ಹೊಳೆ ಇದೆ. ಇದಕ್ಕೆ ಅಡ್ಡಲಾಗಿ ನಿರ್ಮಿಸಿದ 2 ಕಿಂಡಿ ಅಣೆಕಟ್ಟುಗಳನ್ನು ಬಳಸಿಕೊಂಡು ಬೇಸಗೆಯಲ್ಲಿ ಅಗತ್ಯವಿರುವ 8.9. ಎಂ.ಸಿ.ಎಫ್‌.ಟಿ. ನೀರನ್ನು ಶುದ್ಧೀಕರಿಸಿ ಪೂರೈಸಲು 2015ರಲ್ಲಿ 29.32 ಕೋಟಿ ಯೋಜನೆ ಸಿದ್ಧಪಡಿಸಲಾಗಿತ್ತು. ಆ ಬಳಿಕ ಎರಡು ಬಾರಿ ಪರಿಷ್ಕೃತಗೊಳಿಸಲಾಯಿತು. 2017ರಲ್ಲಿ ಯೋಜನಾ ವೆಚ್ಚ 41 ಕೋಟಿ ರೂ. ತಲುಪಿತ್ತು. ಸರ್ವೇ ನಡೆಸಿ ವರದಿಯನ್ನೂ ಸರಕಾರದ ಅನುಮೋದನೆಗೆ ಕಳುಹಿಸಲಾಯಿತು. ವಾಟರ್‌ ಟ್ಯಾಂಕ್‌, ಶುದ್ಧೀಕರಣ ಘಟಕದ ನಿರ್ಮಾಣಕ್ಕೆ ಅಗತ್ಯವಿರುವ ಸರಕಾರಿ ಭೂಮಿಯನ್ನೂ ಗುರುತಿಸಲಾಗಿದೆ. ಆದರೆ ಯೋಜನೆ ಕೊನೆಯ ಹಂತದಲ್ಲಿ ಕಾರ್ಯಗತವಾಗಲಿಲ್ಲ.

Advertisement

ಇದು ಕೈಗೂಡಿದ್ದರೆ 12.39. ಎಂ.ಸಿ.ಎಫ್‌.ಟಿ.ಗಿಂತ ಹೆಚ್ಚು ನೀರು ಸಂಗ್ರಹಿಸಿ ಬಳಸಬಹುದಿತ್ತು. ಪ.ಪಂ. ವ್ಯಾಪ್ತಿಗೆ ಅಗತ್ಯವಿರುವ 8.9. ಎಂ.ಸಿ.ಎಫ್‌.ಟಿ. ನೀರು ಬಳಸಿಕೊಂಡು ಉಳಿದ ಪ್ರಮಾಣವನ್ನು ನೀರನ್ನು ಪಕ್ಕದ ವಡ್ಡರ್ಸೆ, ಪಾಂಡೇಶ್ವರ, ಕೋಟ ಗ್ರಾ.ಪಂ.ಗಳಿಗೆ ನೀಡಬಹುದಿತ್ತು. ಆದರೆ ಇಡೀ ಯೋಜನೆಯೇ ಧೂಳು ಹಿಡಿದಿದೆ. ಇದೀಗ ಹೊಸಾಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ 35 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟಿನಿಂದ ನೀರನ್ನು ಶುದ್ಧೀಕರಿಸಿ ಬಳಸಿಕೊಳ್ಳುವ ಮತ್ತೂಂದು ಯೋಜನೆ ರೂಪಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next