ಸಕಲೇಶಪುರ: ಧರ್ಮ ಪ್ರಜ್ಞೆಯಿಂದ ಮಾತ್ರ ಆರೋಗ್ಯದಾಯಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲೂಕಿನ ಯಸಳೂರು ತೆಂಕಲಗೊಡು ಬೃಹನ್ಮಠದ ಲಿಂಗೈಕ್ಯ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳ ಶಿವಗಣಾ ರಾಧನಾ ಹಾಗೂ ಶ್ರೀ ಪೂರ್ಣ ಚಂದ್ರ ದೇವರ ಪಟ್ಟಾಧಿಕಾರ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಆಧ್ಯಾತ್ಮದ ಮೌಲ್ಯಗಳನ್ನು ಬೆಳೆಸಿಕೊಂಡು ಬಂದ ಮಠಗಳ ಪಾತ್ರ ಹಿರಿಯದು ಎಂದರು.
ಕಾಯಕ ದಾಸೋಹ: ವೀರಶೈವ ಧರ್ಮ ಧಾರ್ಮಿಕ ಮತ್ತು ಸಾಮಾಜಿಕವಾಗಿ ಅಮೂಲ್ಯ ಚಿಂತನೆಗಳನ್ನು ಕೊಟ್ಟಿದೆ. ಕಾಯಕ ದಾಸೋಹದ ಮೂಲಕ ಬದುಕಿನ ಉನ್ನತಿಗೆ ಶ್ರಮಿಸಿದ್ದನ್ನು ಕಾಣುತ್ತೇವೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಕೊಟ್ಟ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಆತ್ಮ ವಿಶ್ವಾಸವಿದೆ: ಲಿಂಗೈಕ್ಯ ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮಿಗಳು 41 ವರ್ಷಗಳ ಕಾಲ ಶ್ರೀ ಮಠದ ಅಭಿವೃದ್ಧಿ ಮತ್ತು ಭಕ್ತರ ಕಲ್ಯಾಣಕ್ಕಾಗಿ ಶ್ರಮಿಸಿದ್ದನ್ನು ಮರೆಯಲಾಗದು. ಇಂದು ಪಟ್ಟಾಭಿಷಿಕ್ತರಾದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಅದೇ ದಾರಿಯಲ್ಲಿ ಮುನ್ನಡೆದು ಭಕ್ತ ಸಂಕುಲಕ್ಕೆ ಮಾರ್ಗದರ್ಶನ ನೀಡುತ್ತಾರೆಂಬ ಆತ್ಮ ವಿಶ್ವಾಸವಿದೆ ಎಂದು ತಿಳಿಸಿದರು.
ನಿರಂತರ ಪರಿಶ್ರಮ: ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಮಾತನಾಡಿ, ಭೌತಿಕ ಬದುಕು ಸಮೃದ್ಧಗೊಳ್ಳಲು ಧರ್ಮಜ್ಞಾನ ಮತ್ತು ಆಚರಣೆ ಅಗತ್ಯ. ಮನುಷ್ಯ ಧರ್ಮದಿಂದ ವಿಮುಖನಾದರೆ ಏನೆಲ್ಲ ಇದ್ದರೂ ಇಲ್ಲದಂತೆ ಎಂಬುದನ್ನು ಮರೆಯಬಾರದು. ಮಠಗಳು ಸಮಾಜದ ಏಳಿಗೆಗೆ ಶ್ರಮಿಸುತ್ತದೆ. ಮಲೆನಾಡಿನ ಈ ಪ್ರಾಂತದಲ್ಲಿ ತೆಂಕಲಗೊಡು ಬೃಹನ್ಮಠ ಇದ್ದು ಲಿಂಗೈಕ್ಯ ಚನ್ನಮಲ್ಲಿಕಾರ್ಜುನ ಶ್ರೀಗಳ ತ್ಯಾಗ ಮತ್ತು ನಿರಂತರ ಪರಿಶ್ರಮ ದಿಂದ ಬೆಳೆಸಿದ್ದಾರೆ ಎಂದರು. ಭಕ್ತರು ಸಹಕರಿಸಿ: ನೂತನ ಶ್ರೀಗಳಾದ ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉಭಯ ಜಗದ್ಗುರುಗಳ ಮಕ್ಕಳಿಗೆ ಪ್ರತಿಯೊಬ್ಬರು ಮೊದಲು ಸಂಸ್ಕಾರ ಕಲಿಸಬೇಕು. ಮಠಗಳಿಂದ ಮಾತ್ರ ಮಕ್ಕಳು ಸಂಸ್ಕಾರ ಪಡೆಯಲು ಸಾಧ್ಯ ಎಂದರು.
ಅಖೀಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷ ಎಡೆಯೂರು ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮೈಸೂರಿನ ಅರಮನೆ ಜಪದಕಟ್ಟೆ ಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಶ್ರೀ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಮಠದ ಶ್ರೀ ಮಹಂತಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರ ಮುನಿಸ್ವಾಮಿ, ಬೆಟ್ಟದಪುರದ ಕನ್ನಡಮಠದ ಶ್ರೀ ಚನ್ನಬಸವಸ್ವಾಮೀಜಿ, ಕೆ.ಆರ್‌ನಗರದ ಕರ್ಪೂರವಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಚಾರ್ಯಸ್ವಾಮೀಜಿ, ಕಾರ್ಜುವಳ್ಳಿ ಮಠದ ಶಂಭುಲಿಂಗಸ್ವಾಮೀಜಿ, ಅಂಕನಹಳ್ಳಿ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಹಾಗೂ ಶಾಸಕ ಎಚ್.ಕೆ.ಕುಮಾರ ಸ್ವಾಮಿ, ಮಾಜಿ ಶಾಸಕ ಬಿ.ಆರ್.ಗುರುದೇವ್, ಎಚ್.ಎಂ.ವಿಶ್ವನಾಥ್ ಇದ್ದರು.