ಯಲಹಂಕ: ಯುವಜನರು ಸಂಸ್ಕೃತಿ, ಸಂಸ್ಕಾರ ಮತ್ತು ದೇಶಭಕ್ತಿಯನ್ನು ಹೊಂದುವ ಮೂಲಕ ದೇದೇಶ ಸದೃಢಗೊಳಿಸಬೇಕು ಎಂದು ವಿಭು ಅಕಾಡೆಮಿಯ ಸಂಸ್ಥಾಪಕಿ ಡಾ. ಆರತಿ ಯುವಕರಿಗೆ ಕರೆ ನೀಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಬೆಂಗಳೂರು ನಗರಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಹಂಕ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಯುವ ಸಪ್ತಾಹದ ಅಂಗವಾಗಿ ಯುವ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಯುವಕರು ಜೀವನದಲ್ಲಿ ಗುರಿ ಹೊಂದಿರಬೇಕು, ದುರ್ಬಲ ಮನಸ್ಸು ಇರಬಾರದು, ಭಾರತದ ಸಂಸ್ಕೃತಿಗೆ ಪ್ರಪಂಚದಲ್ಲಿಯೇ ವಿಶೇಷವಾದ ಗೌರವವಿದೆ. ನಮ್ಮ ಸಂಸ್ಕೃತಿಯನ್ನು ಬೆಳೆಸುವ ಜವಬ್ದಾರಿ ಯುವಕರಿಗೆ ಇದೆ. ಯುವಕರು ದೇಶಭಕ್ತಿ ಹೊಂದಿದಾಗ ಮಾತ್ರ ದೇಶ ಸದೃಢವಾಗಿರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ವಿದೇಶದಲ್ಲಿ ಭಾರತದ ಕೀರ್ತಿಯನ್ನು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಿದರೆ ತಮ್ಮ ವ್ಯಕ್ತಿತ್ವದ ಜೊತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ನಗರದ ಸಹಾಯಕ ನಿರ್ದೇಸಕರಾದ ಶಶಿಕಲಾ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಲೋಕಪ್ಪಗೌಡ ಮತ್ತಿತರರು ಹಾಜರಿದ್ದರು. ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.