Advertisement

ದೇಶಾಭಿಮಾನ ಸಾರುವ ಮಾನಸಗಂಗಾ

10:26 AM Mar 20, 2020 | mahesh |

ದೇಶಕ್ಕಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುವ ಕಥಾನಾಯಕಿ, ಭ್ರಾತೃಪ್ರೇಮದ ಸಾಕಾರ ಮೂರ್ತಿಯಾದ ಸಹ ಕಥಾನಾಯಕ , ಮುಗ್ಧನಾದರೂ ದೇಶಪ್ರೇಮಕ್ಕೆ ಬದ್ಧನಾದ ಯುವಕ , ದೇಶದೊಳಗಿದ್ದೇ ದೇಶದ್ರೋಹದಲ್ಲಿ ನಿರತನಾದ ಮಂತ್ರಿ ಹೀಗೆ ಮಾನಸಗಂಗಾ
ಕುತೂಹಲ ಮೂಡಿಸುತ್ತದೆ .

Advertisement

ಪ್ರೊ| ಪವನ್‌ ಕಿರಣಕೆರೆಯವರ ನೂತನ ಪ್ರಸಂಗ ಮಾನಸಗಂಗಾ ಈ ವರ್ಷದ ಪೆರ್ಡೂರು ಮೇಳದವರ ತಿರುಗಾಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಫ‌ಲವಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ . ಪ್ರೇಮ ವೈಫ‌ಲ್ಯಗೊಂಡ ಹತಾಶಾ ಭಾವನೆಯಿಂದ ಸ್ತ್ರೀ ದ್ವೇಷಿಯಾಗಿ ಪರಿವರ್ತನೆಗೊಂಡ ಕಥಾನಾಯಕ , ದೇಶಕ್ಕಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುವ ಕಥಾನಾಯಕಿ , ಭ್ರಾತೃಪ್ರೇಮದ ಸಾಕಾರ ಮೂರ್ತಿಯಾದ ಸಹ ಕಥಾನಾಯಕ , ಮುಗ್ಧನಾದರೂ ದೇಶಪ್ರೇಮಕ್ಕೆ ಬದ್ಧನಾದ ಯುವಕ , ದೇಶದೊಳಗಿದ್ದೇ ದೇಶದ್ರೋಹದಲ್ಲಿ ನಿರತನಾದ ಮಂತ್ರಿ , ಆ ಮಂತ್ರಿಯ ತಂತ್ರ ಅರಿಯದೆ ಆತನ ಹೆಜ್ಜೆಗೆ ತಾಳ ಹಾಕಿ ದುರಂತಕ್ಕೆ ಕಾರಣಳಾಗುವ ಮುಗೆœ ಮಹಾರಾಣಿಯರ ಸುತ್ತ ಹೆಣೆದ ಮಾನಸಗಂಗಾ ಕುತೂಹಲ ಮೂಡಿಸುತ್ತದೆ .

ಗಂಗೋತ್ರಿ ಎಂಬ ದೇಶಕ್ಕೂ ವಜ್ರಗಿರಿಗೂ ಪೂರ್ವದ್ವೇಷ ಬೆಳೆದು ಗಂಗೋತ್ರಿಯ ಅರಸನ ಕೊನೆಯಾದಾಗ ಆತನ ಪತ್ನಿ ಭಾಗೀರಥಿ ದೇವಿಯು ಮಹಾರಾಣಿಯಾಗುತ್ತಾಳೆ .ಮಹಾರಾಣಿಯ ಅಣ್ಣನಾದ ಭುಜಂಗರಾಯನು ರಾಜ್ಯ ಕಬಳಿಸಲು ಸಮಯ ಸಾಧಿಸುತ್ತಾನೆ . ಗಂಗೋತ್ರಿಯ ಗಡಿಭಾಗದಲ್ಲಿರುವ ಗೋಮಾಂಸ ಭಕ್ಷಣೆ , ಭಯೋತ್ಪಾದನೆ ಮುಂತಾದ ಅಸುರಿ ಪ್ರವೃತ್ತಿಯನ್ನೇ ಹೊಂದಿರುವ ರಕ್ತವರ್ಣಿ ಜನಾಂಗದ ತಾರಾಕ್ಷ ಎಂಬ ದುಷ್ಟ ವಜ್ರಗಿರಿಯ ರಾಜಕುಮಾರಿ ಶರಾವತಿಯನ್ನು ಬಲಾತ್ಕರಿಸಲು ಬಂದಾಗ ಅವಳು ಗಂಗಾನದಿಗೆ ಹಾರುತ್ತಾಳೆ .

ಶರಾವತಿಯನ್ನು ರಕ್ಷಿಸಿದ ಯಕ್ಷಗಾನ ಮೇಳದ ಯಜಮಾನ ಚಿಕ್ಕನು ಅವಳಿಗೆ ಹಂಸಿನಿ ಎಂಬ ಹೆಸರಿಟ್ಟು ಸಾಕುತ್ತಾನೆ . ವಿದ್ಯಾಭ್ಯಾಸ ಮುಗಿಸಿ ಬಂದ ಭಾಗೀರಥಿಯ ಮಗ ಕಂಠೀರವ ಹಾಗೂ ಸಾಕುಮಗ ಶರ್ವ ಹಂಸಿನಿಯನ್ನು ನೋಡುತ್ತಾರೆ . ಕಂಠೀರವನು ಹಂಸಿನಿಯನ್ನು ವಿವಾಹವಾಗಬೇಕೆಂದು ಆಶಿಸಿದರೂ ಅವಳು ಶರ್ವನಲ್ಲಿ ಅನುರಕ್ತಳಾದಾಗ ಶರ್ವನೇ ಅವಳಿಗೆ ಕಂಠೀರವನನ್ನೇ ವಿವಾಹವಾಗಬೇಕೆಂದು ತಿಳಿ ಹೇಳಿ ಒಪ್ಪಿಸುತ್ತಾನೆ . ತಾನು ಬ್ರಹ್ಮಚಾರಿ ಎಂದು ಎಲ್ಲರನ್ನೂ ನಂಬಿಸಿದ ಭುಜಂಗರಾಯನು , ಗುಟ್ಟಾಗಿ ಪಡೆದ ತನ್ನ ಮಕ್ಕಳಾದ ಪನ್ನಗಭೂಷಣ ಹಾಗೂ ಪ್ರಿಯದರ್ಶಿನಿಯರನ್ನು ಕುಶಸ್ಥಲಿಯ ಅರಸು ಮಕ್ಕಳು ಎಂದೂ , ಪ್ರಿಯದರ್ಶಿನಿಯನ್ನು ಕಂಠೀರವನು ವಿವಾಹವಾದರೆ , ರಾಜ್ಯ ಸುಭದ್ರವಾಗುತ್ತದೆ ಎಂದೂ ಭಾಗೀರಥಿಗೆ ಸೂಚಿಸುತ್ತಾನೆ . ಕುತಂತ್ರಕ್ಕೆ ಬಲಿಯಾದ ಭಾಗೀರಥಿಯು ಹಂಸಿನಿಗೆ ಕಂಠೀರವನನ್ನು ವಿವಾಹವಾಗಬಾರದು ಎಂದು ಕೇಳಿಕೊಂಡಾಗ ಹಂಸಿನಿಯು ತಾನು ಬೇರೊಬ್ಬರನ್ನು ಪ್ರೇಮಿಸಿದ್ದೇನೆ ಎಂದು ಸುಳ್ಳು ಹೇಳಿ ಕಂಠೀರವನನ್ನು ತೊರೆದು , ದೇಶದ ಗಡಿಭಾಗದಲ್ಲಿ ನೆಲೆಸುತ್ತಾಳೆ  ತನಗೆ ಮೋಸ ಮಾಡಿದ ಹಂಸಿನಿಯ ಮೇಲಿನ ದ್ವೇಷದಿಂದಾಗಿ ಕಂಠೀರವನು ಸ್ತ್ರೀ ದ್ವೇಷಿಯಾಗಿ ಪರಿವರ್ತನೆಗೊಳ್ಳುತ್ತಾನೆ . ಗಡಿ ಪ್ರದೇಶದಲ್ಲಿ ಹಂಸಿನಿಯನ್ನು ಕಂಡ ಶರ್ವನು ಹಂಸಿನಿಯನ್ನು ಕರೆ ತಂದಾಗ , ಭುಜಂಗಯ್ಯನ ಕುತಂತ್ರ ಅರಿತ ಭಾಗೀರಥಿಯು ಹಂಸಿನಿಯೇ ಕಂಠೀರವನನ್ನು ವರಿಸಬೇಕೆಂದರೂ , ಕಂಠೀರವನು ಹಂಸಿನಿಯ ಮೇಲೆ ಸೇಡು ತೀರಿಸುವ ದ್ವೇಷದಲ್ಲಿ ತಾನು ಪ್ರಿಯದರ್ಶಿನಿಯನ್ನು ವಿವಾಹವಾಗುವುದಾಗಿ ಹೇಳಿ ನಿರಾಕರಿಸುತ್ತಾನೆ . ತಾರಾಕ್ಷನ ಸಂಚಿನಿಂದ , ಹಂಸಿನಿಯಿಂದಲೇ ಗಂಗಾಭವಾನಿ ದೇವಸ್ಥಾನ ಧ್ವಂಸ ಮಾಡಲು ಸಂಚು ಹೂಡಿದರೂ , ಹಂಸಿನಿಯ ಧರ್ಮಬುದ್ಧಿ ಜಾಗೃತಗೊಂಡು , ತಾರಾಕ್ಷನ ಬೆಂಬಲಿಗರನ್ನೇ ಸುಡುತ್ತಾಳೆ . ಹಂಸಿನಿಯ ತ್ಯಾಗ ಗುಣ ಅರಿತು ಕಂಠೀರವನು ವಿವಾಹವಾಗಿ ಸುಖಾಂತವಾಗುತ್ತದೆ.

ಖಳನಾಯಕ ಭುಜಂಗರಾಯನಾಗಿ ಥಂಡಿಮನೆ ಶ್ರೀಪಾದ ಭಟ್ಟರು ಚೆನ್ನಾಗಿ ನಿರ್ವಹಿಸಿದ್ದಾರೆ . ಕಂಠೀರವನಾಗಿ ವಿದ್ಯಾಧರ ಜಲವಳ್ಳಿಯವರು ಇಡೀ ಪ್ರಸಂಗದಲ್ಲಿ ಎದ್ದು ಕಾಣುತ್ತಾರೆ . .ಶರ್ವನಾಗಿ ಕಿರಾಡಿ ಪ್ರಕಾಶ ಮೊಗವೀರರದ್ದು ನೆನಪಲ್ಲಿ ಉಳಿಯುವ ನಿರ್ವಹಣೆ . ಹಂಸಿನಿಗೆ ಹಿತೋಪದೇಶ ನೀಡುವ ಸಂದರ್ಭದಲ್ಲಿ ಮೂರಕ್ಷರದ ಪದಗಳನ್ನು ನಿರರ್ಗಳವಾಗಿ ಪೋಣಿಸಿ ಹೇಳಿದ ವಿಧಾನ ಮನ ಗೆದ್ದಿತು . ಹಂಸಿನಿಯಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು ಉತ್ತಮ ನಾಟ್ಯ , ಅಭಿನಯ , ಮಾತುಗಾರಿಕೆಯಿಂದ ಗಮನ ಸೆಳೆದರು .ಪನ್ನಗಭೂಷಣನಾಗಿ ಕಾರ್ತಿಕ ಚಿಟ್ಟಾಣಿಯವರು ತಾನು ಮುಗ್ಧನಾದರೂ ಗುಣಗಳಿಂದ ತಾನು ಪ್ರಬುದ್ಧ ಎಂಬ ಅಂಶವನ್ನು ಚೆನ್ನಾಗಿ ನಿರೂಪಿಸಿದರು . ಮಹಾರಾಣಿ ಭಾಗೀರಥಿಯಾಗಿ ವಿಜಯ ಗಾಣಿಗ ಬೀಜಮಕ್ಕಿಯವರು ಪಾತ್ರದ ಘನತೆ ಅರಿತು ನಿರ್ವಹಿಸಿದರು . ಹಾಸ್ಯ ಪಾತ್ರಗಳಲ್ಲಿ ರಮೇಶ್‌ ಭಂಡಾರಿ , ಪುರಂದರ ಮೂಡ್ಕಣಿ , ರವೀಂದ್ರ ದೇವಾಡಿಗರು ಹಾಸ್ಯವು ಅಪಹಾಸ್ಯವಾಗಕೂಡದು ಎಂಬ ಕಾಳಜಿಯೊಂದಿಗೆ ಸೃಜನಶೀಲ ಹಾಸ್ಯಕ್ಕೆ ಒತ್ತು ಕೊಟ್ಟದ್ದು ಕಂಡು ಬಂತು . ಉಳಿದಂತೆ ಜನಾರ್ದನ ಗುಡಿಗಾರ , ತೊಂಬಟ್ಟು ವಿಶ್ವನಾಥ ಆಚಾರ್ಯ , ಅಣ್ಣಪ್ಪ ಗೌಡ ಮಾಗೋಡು , ನಾಗರಾಜ ದೇವಲ್ಕುಂದ , ನಾಗರಾಜ ಭಟ್‌ ಕುಂಕಿಪಾಲು , ಸನ್ಮಯ , ಪ್ರಣವ್‌ , ವಿನಾಯಕ ಗುಂಡಬಾಳ ಸಹಿತ ಸರ್ವ ಕಲಾವಿದರ ಪ್ರಯತ್ನವೂ ಪ್ರಸಂಗ ಯಶಸ್ವಿಯಾಗಲು ಕಾರಣವಾಯಿತು . ಪೂರ್ವಾರ್ಧದ ಭಾಗವತಿಕೆಯಲ್ಲಿ ರತ್ನಾಕರ ಗೌಡ , ಪ್ರಸನ್ನ ಭಟ್‌ ಬಾಳ್ಕಲ್‌ , ಚೆಂಡೆ – ಮದ್ದಲೆಯಲ್ಲಿ ಸುಜನ್‌ ಕುಮಾರ್‌ , ಶಶಿಕುಮಾರ್‌ ಆಚಾರ್ಯ ಉತ್ತಮ ಪ್ರಸ್ತುತಿ ನೀಡಿದರು .ಉತ್ತರಾರ್ಧದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯರ ಹಾಡುಗಳು ಮುದ ನೀಡಿತು .ಚೆಂಡೆ – ಮದ್ದಲೆಯಲ್ಲಿ ಸುನಿಲ್‌ ಭಂಡಾರಿ , ರವಿ ಕಾಡೂರು ಸಹಕರಿಸಿದರು

Advertisement

ಎಂ .ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next