ಕಾಪು: ನಿರಂತರವಾಗಿ ಸಮಾಜಮುಖೀ ಕಾರ್ಯಕ್ರಮಗಳನ್ನು ಆಯೋ ಜಿಸುತ್ತಿರುವ ಮೂಡುಬೆಳ್ಳೆ ಪಾಣಾರ ಸಂಘದ ಸಂಘಟನಾ ಸ್ಫೂರ್ತಿ ಮಾದರಿಯಾಗಿದೆ. ಸಮಾಜ ಬಾಂಧವರ ಅಭ್ಯುದಯದ ಜತೆಗೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿರುವ ಪಾಣಾರ ಸಂಘದ ಕಾರ್ಯ ಶ್ಲಾಘನೀಯ ಎಂದು ಬೆಳ್ಳೆ ಗ್ರಾ. ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ ಹೇಳಿದರು.
ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಮೂಡುಬೆಳ್ಳೆ ಶಾಖೆ ಇವರ ನೇತೃತ್ವದಲ್ಲಿ ಜು. 23ರಂದು ಮೂಡುಬೆಳ್ಳೆ ಬಬ್ಬರ್ಯ ಕೆರೆ ಸಮೀಪದ ಕೆಸರು ಗದ್ದೆಯಲ್ಲಿ ಆಯೋಜಿಸಿದ ಮೂರನೇ ವರ್ಷದ ಆಟಿಡೊಂಜಿ ದಿನ – ಕೆಸರª ಗೊಬ್ಬುಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಾಣಾರ ಸಂಘ ಮೂಡುಬೆಳ್ಳೆ ಶಾಖೆಯ ಅಧ್ಯಕ್ಷ ಸುಧಾಕರ್ ಪಾಣಾರ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್. ಸುವರ್ಣ, ಬೆಳ್ಳೆ ಗ್ರಾ. ಪಂ. ಸದಸ್ಯರಾದ ರಾಜೇಂದ್ರ ಶೆಟ್ಟಿ, ಎ. ಜಿ. ಡಿ’ಸೋಜಾ, ತಾ. ಪಂ. ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಟಾರ್, ಜಿ. ಪಂ. ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್, ಉದ್ಯಮಿ ಶಿವರಾಮ್ ಸಾಲ್ಯಾನ್, ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಜಿಲ್ಲಾ ಪಾಣಾರ ಸಂಘದ ಗೌರವಾಧ್ಯಕ್ಷ ಮಾಧವ ಪಾಣಾರ ಅಮ್ಮುಂಜೆ, ಸಂಘದ ಜಿಲ್ಲಾಧ್ಯಕ್ಷ ಎಚ್. ಸಖಾರಾಮ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ದೇವರಾಜ್ ಪಾಣಾರ, ಪಾಣಾರ ಮಹಿಳಾ ಸಂಘದ ಅಧ್ಯಕ್ಷೆ ಕುಸುಮಾ ದೆಂದೂರುಕಟ್ಟೆ, ಪ್ರಧಾನ ಕಾರ್ಯದರ್ಶಿ ಗಿರಿಜಾ ಮಡಿಕೆಟ್ಟು, ಕಾರ್ಯಕ್ರಮಕ್ಕೆ ಗದ್ದೆಯನ್ನು ಒದಗಿಸಿದ ಲಲಿತಾ ಪೂಜಾರ್ತಿ, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು. ಕೆಸರುದ್ದೆಯಲ್ಲಿ ವಾಲಿಬಾಲ್, ಕಬಡ್ಡಿ, ತಪ್ಪಂಗಾಯಿ, ಓಟ ಸಹಿತ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆದವು.
ಹಾಲೆ ಕೆತ್ತೆ ಮದ್ದು, ಮೆಂತೆ ಗಂಜಿ: ಆಟಿ ಅಮವಾಸ್ಯೆಯ ಪ್ರಯುಕ್ತ ಹಾಲೆ ಕೆತ್ತೆಯ ಮದ್ದನ್ನು ತಯಾರಿಸಿಡಲಾಗಿದ್ದು, ಮೆಂತೆ ಗಂಜಿಯ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಊಟಕ್ಕೆ ಗಂಜಿ, ತಿಮರೆ ಚಟ್ನಿ, ಎಟ್ಟಿ ಚಟ್ನಿ, ನುಗ್ಗೆ ಸೊಪ್ಪು-ಬೋಳೆ ಸುಕ್ಕ, ಉಪ್ಪಡ್ ಪಚ್ಚಿರ್, ತೇವಿನ ಪಲ್ಯ ಇತ್ಯಾದಿ ತಯಾರಿಸಲಾಗಿತ್ತು.
ಕಂಬಳದ ಸಂಭ್ರಮ
ತುಳುನಾಡಿನ ಸಾಂಸ್ಕೃತಿಕ ಕ್ರೀಡೆ ಕಂಬಳಕ್ಕಿದ್ದ ಕಾನೂನು ತೊಡಕು ರಾಷ್ಟ್ರಪತಿಯವರು ಅಧ್ಯಾದೇಶಕ್ಕೆ ಅಂಕಿತ ಹಾಕಿದ ಬಳಿಕ ನಿವಾರಣೆಯಾಗಿದ್ದು, ಈ ನಿಟ್ಟಿನಲ್ಲಿ ಸಂಪ್ರದಾಯಬದ್ಧವಾಗಿ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವ ಮೂಲಕ ಸಂಭ್ರಮ ಆಚರಿಸಲಾಯಿತು. ಬಳಿಕ ಕೋಣಗಳಿಗೆ ತಿನ್ನಲು ಹುರುಳಿ ನೀಡಲಾಯಿತು.