ಬೆಂಗಳೂರು: ಶನಿವಾರ ನಡೆದ ಪ್ರೊ ಕಬಡ್ಡಿ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ 37-33 ಅಂಕಗಳಿಂದ ಯುಪಿ ಯೋಧಾ ತಂಡವನ್ನು ಸೋಲಿಸಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು.
ಎರಡೂ ತಂಡಗಳ ನಡುವೆ ಕೊನೆ ಯವರೆಗೆ ಸಮಬಲದ ಪೈಪೋಟಿ ನಡೆಯಿತು. ಅಂತಿಮವಾಗಿ ಡೆಲ್ಲಿ ಗೆಲುವಿನ ಸರದಾರನಾಗಿ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿದೆ.
ಪಂದ್ಯದ ಮೊದಲ 20 ನಿಮಿಷಗಳಲ್ಲಿ ಡೆಲ್ಲಿ ಹಿನ್ನಡೆ ಸಾಧಿಸಿತ್ತು. ಆಗ ಡೆಲ್ಲಿಯ ಅಂಕ 13, ಯೋಧಾ ಅಂಕ 18. ಆದರೆ ದ್ವಿತೀಯಾರ್ಧದ 20 ನಿಮಿಷಗಳಲ್ಲಿ ಪರಿಸ್ಥಿತಿ ಬದಲಾಯಿತು. ಡೆಲ್ಲಿ ಗಳಿಕೆ 24ಕ್ಕೇರಿದರೆ, ಯೋಧಾ 15 ಅಂಕ ಮಾತ್ರ ಗಳಿಸಿತು. ಒಟ್ಟಾರೆ ಯೋಧಾಗಿಂತ ಹೆಚ್ಚುವರಿ ನಾಲ್ಕು ಅಂಕ ಗಳಿಸಿ ಡೆಲ್ಲಿ ಗೆಲುವು ಸಾಧಿಸಿತು.
ಡೆಲ್ಲಿ ಪರ ದಾಳಿಗಾರ ನವೀನ್ ಕುಮಾರ್ ಮೆರೆದಾಡಿದರು. ಅವರು 27 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 12 ಅಂಕ ಕಲೆಹಾಕಿದರು. ಒಟ್ಟಾರೆ 18 ಅಂಕ ಗಳಿಸಿದರು. ಇದರಲ್ಲಿ ಒಂದು ಅಂಕ ಡ್ಯಾಕಲ್‌ನಿಂದ ದಾಖಲಾಯಿತು.ಇನ್ನು ಆಲ್‌ರೌಂಡರ್ ವಿಜಯ್ ಕೂಡ ದಾಳಿಯಲ್ಲಿ ಮಿಂಚಿದರು. ಅವರು 12 ದಾಳಿಗಳಲ್ಲಿ 7 ಅಂಕ ಸಂಪಾದಿಸಿದರು.
ಯೋಧಾ ಪರ ಪ್ರದೀಪ್ ನರ್ವಾಲ್, ಸುರೇಂದರ್ ಗಿಲ್ ತಲಾ 9 ಅಂಕ ಸಂಪಾದಿಸಿದರು. ಆದರೆ ಇವರ ಆಟ ತಂಡದ ನಿರೀಕ್ಷೆಯ ಮಟ್ಟಕ್ಕಿರಲಿಲ್ಲ. ಪ್ರೊ ಕಬಡ್ಡಿಯ ಸೂಪರ್ ಸ್ಟಾರ್ ಆಗಿರುವ ನರ್ವಾಲ್ 20 ಬಾರಿ ಡೆಲ್ಲಿ ಕೋಟೆಯನ್ನು ಪ್ರವೇಶಿಸಿದರೂ, ಅದನ್ನು ಭೇದಿಸುವಲ್ಲಿ ಬಹಳ ಯಶಸ್ಸು ಕಾಣಲಿಲ್ಲ. ಪ್ರದೀಪ್‌ಗೆ ಹೋಲಿಸಿದರೆ ಸುರೇಂದರ್ ಗಿಲ್ 17 ದಾಳಿಗಳಲ್ಲಿ 9 ಅಂಕ ಗಳಿಸಿದರು.
ಇದನ್ನೂ ಓದಿ:ಟೆನಿಸ್: ಪ್ರಶಸ್ತಿ ಸುತ್ತಿಗೇರಿದ ಬೋಪಣ್ಣ-ರಾಮ್‌ಕುಮಾರ್
ಸೋಲಿನ ಅಭಿಯಾನ ಮುಂದುವರೆಸಿದ ತೆಲುಗು
ದಿನದ ಮತ್ತೊಂದು ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಇರಾದೆಯೊಂದಿಗೆ ಆಡಲಿಳಿದ ತೆಲುಗು ಟೈಟಾನ್ಸ್ ತಂಡ ಯು ಮುಂಬಾ ವಿರುದ್ಧ 48-38 ಅಂತರದಿಂದ ಸೋಲನುಭವಿಸಿ ತನ್ನ ಸೋಲಿನ ಅಭಿಯಾನವನ್ನು ಮುಂದುವರೆಸಿದೆ.
ಮುಂಬಾ ಪರ ರೈಡರ್ ಅಭಿಷೇಕ್ ಸಿಂಗ್ (13), ಅಜೀತ್ (8), ರಿಂಕೂ (7), ನಾಯಕ ಅಟ್ರಾಚೆಲಿ (4) ಅಂಕ ಗಳಿಸಿ ಮಿಂಚಿದರು.