ಪಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರದ ಮದ್ಯ ನಿಷೇಧ ಉಪಕ್ರಮಕ್ಕೆ ಪಟ್ನಾ ಹೈಕೋರ್ಟ್ ಭಾರೀ ದೊಡ್ಡ ಹೊಡೆತ ನೀಡಿದೆ.
ಮದ್ಯ ನಿಷೇಧ ಕಾಯಿದೆಯ ಕೇಸ್‌ನಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುವಂತಾಗಬೇಕು ಎಂದು ಅಪ್ಪಣೆ ಕೊಡಿಸಿರುವ ಪಟ್ನಾ ಹೈಕೋರ್ಟ್, ಬಿಹಾರ ಮದ್ಯ ನಿಷೇಧ ಮತ್ತು ಅಬಕಾರಿ ಕಾಯಿದೆಯ ಸೆ.76(2) ಅಸಾಂವಿಧಾನಿಕವಾಗಿದೆ ಎಂದು ಹೇಳಿದೆ.
ಬಿಹಾರ ಸರಕಾರ ರೂಪಿಸಿದ್ದ ಈ ಕಾಯಿದೆಯಡಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರಾಗುವಂತಿರಲಿಲ್ಲ. ಬಿಹಾರ ಮದ್ಯ ನಿಷೇಧ ಮತ್ತು ಅಬಕಾರಿ ಕಾಯಿದೆಯ ಸೆ.76(2)ನ್ನು ಅಸಾಂವಿಧಾನಿಕವೆಂದು ಘೋಷಿಸುವ ತನಕ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವಂತಿಲ್ಲ ಎಂದು ಈ ಹಿಂದೆ ಪಟ್ನಾ ಹೈಕೋರ್ಟಿನ ಏಕ ನ್ಯಾಯಾಧೀಶ ಪೀಠ ಹೇಳಿತ್ತು.
ಈ ವಿಷಯದಲ್ಲೀಗ ಪಟ್ನಾ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ
ಕೆಳ ನ್ಯಾಯಾಲಯವು ಮದ್ಯ ನಿಷೇಧ ಕೇಸಿನಡಿ ಆರೋಪಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದರೆ, ಅದನ್ನು ಯಾಕಾಗಿ ನಿರಾಕರಿಸಲಾಯಿತು ಎಂಬ ವಿವರಣೆಯನ್ನು ನೀಡಬೇಕಾಗುತ್ತದೆ.
ಪಟ್ನಾ ಹೈಕೋರ್ಟ್ ನಲ್ಲಿ ಮಾಜಿ ಸೈನಿಕರೊಬ್ಬರು ಕೋರ್ಟಿಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ , ಜನರಿಗೆ ತಾವು ಏನನ್ನು ತಿನ್ನಬೇಕು, ಏನನ್ನು ಕುಡಿಯಬೇಕು ಎಂದು ತೀರ್ಮಾನಿಸುವ ಹಕ್ಕು ಮೂಲಭೂತವಾಗಿ ಸಂವಿಧಾನದಿಂದ ದೊರಕಿದೆ; ಬಿಹಾರ ಸರಕಾರದ ಈ ಕಾಯಿದೆಯು ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡುತ್ತದೆ ಎಂದು ವಾದಿಸಲಾಗಿತ್ತು.