Advertisement

ನ.27ರಿಂದ ಪಾವಂಜೆ ನೂತನ ಮೇಳದ ತಿರುಗಾಟ ಆರಂಭ: ವರ್ಷದ ಬುಕ್ಕಿಂಗ್ ಪೂರ್ಣ

11:02 AM Nov 24, 2020 | keerthan |

ಪಾವಂಜೆ: ಯಕ್ಷಗಾನದ ಮೇಳ ಪರಂಪರೆಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಮೇಳದ ತಿರುಗಾಟ ಆರಂಭವು ನ. 27 ರಂದು ಜರಗಲಿದೆ.

Advertisement

ಪಾಂಡವಶ್ವಾಮೇಧ ಪ್ರಸಂಗದ ಮೂಲಕ ನೂತನ ಮೇಳವು ಮುಂದಿನ 6 ತಿಂಗಳ ಪ್ರದರ್ಶನದಲ್ಲಿ ಮೇ 25 ರವರೆಗೆ ಈಗಾಗಲೇ 156 ಪ್ರದರ್ಶನ ಬುಕ್ಕಿಂಗ್ ಆಗಿದೆ. ಆರಂಭದ ವರ್ಷದಲ್ಲಿ 50 ಸಾವಿರ ರೂಪಾಯಿಯ ವೀಳ್ಯವನ್ನು ಪಡೆದು ಕೊಳ್ಳಲಾಗುವುದು ಎಂದು ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ವಿವಿಧ ಕಾರ್ಯಕ್ರಮಗಳ ಮೂಲಕ ನೂತನ ಮೇಳದ ತಿರುಗಾಟ ಆರಂಭಗೊಳ್ಳಲಿದ್ದು ಸಂಜೆ 6 ರಿಂದ ರಾತ್ರಿ 11 ರ ವರೆಗೆ ಕಾಲ ಮಿತಿಯಲ್ಲಿ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ಜರಗಲಿದೆ. ಪತ್ತನಾಜೆಯವರೆಗೆ ಎಲ್ಲಾ ದಿನಗಳ ಮೇಳ ಬುಕ್ಕಿಂಗ್ ಆಗಿರುತ್ತದೆ. ದ.ಕ. ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕಾಸರಗೋಡು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರದರ್ಶನ ಜರಗಲಿದ್ದು ಮಳೆಗಾಲದ ಅವಧಿಯಲ್ಲಿ ದೇವಳದಲ್ಲಿ ಪ್ರದರ್ಶನ ಮುಂದುವರಿಯಲಿದೆಯೆಂದು ಅವರು ತಿಳಿಸಿದರು.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಯಾಗ, ಯಜ್ಞಗಳು ನಡೆಯುತ್ತಿರುವ ಪಾವಂಜೆ ಕ್ಷೇತ್ರದಲ್ಲಿ ಯಕ್ಷಗಾನ ಮೇಳವನ್ನು ಆರಂಭಿಸಿದ್ದು ನೂತನ ಮೇಳದ ಪ್ರಥಮ ವರ್ಷದ ತಿರುಗಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಗಣ್ಯರ ಸಮ್ಮುಖದಲ್ಲಿ ಮೇಳವು ಲೋಕಾರ್ಪಣೆಯಾಗಲಿದೆ ಎಂದರು.

Advertisement

ಕಲಾವಿದರು ಇತರ ಮೇಳಕ್ಕೂ ಹೋಗಬಹುದು.

ಮೇಳದಲ್ಲಿ ಇರುವ ನನಗೆ ಇತರ ಮೇಳದಿಂದಲೂ ಅತಿಥಿಯಾಗಿ ಆಹ್ವಾನ ಬಂದಿರುವುದರಿಂದ ಈ ಮೇಳಕ್ಕೆ ಧಕ್ಕೆ ಆಗದೇ, ಇತರ ಮೇಳಕ್ಕೂ ತೆರಳಲಿದ್ದೇನೆ, ಮೇಳದ ಇತರ ಕಲಾವಿದರಿಗೂ ಸಹ ಇದೇ ನಿಯಮವಿದೆ. ಆದರೆ ಪ್ರಥಮ ಪ್ರಾಶಸ್ತ್ಯ ಪಾವಂಜೆ ಮೇಳಕ್ಕಿರಬೇಕು ಇಲ್ಲಿ ಗೈರಾಗಿ ಇನ್ನೊಂದು ಕಡೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಸತೀಶ್ ಶೆಟ್ಟಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next