ಮುಂಡರಗಿ: ಕೇಂದ್ರ ಸರ್ಕಾರವು 2020-21ನೇ ಸಾಲಿನ ಪ್ರತಿ ಟನ್ ಕಬ್ಬಿಗೆ 2,850 ರೂ. ಬೆಲೆ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕಬ್ಬಿನ ಬೆಲೆ ಪುನರ್ ಪರಿಶೀಲನೆ ಮಾಡಬೇಕು. ರಾಜ್ಯ ಸರ್ಕಾರವು ಎಸ್‌ಎಪಿ ಕಾಯ್ದೆ ಮೂಲಕಕಬ್ಬಿನ ಬೆಲೆ ಹೆಚ್ಚು ನಿಗದಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಒತ್ತಾಯಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು 2016-17ರಲ್ಲಿ ಪ್ರತಿ ಟನ್ ಕಬ್ಬಿಗೆ 2,750 ರೂ.ದರ ನಿಗದಿ ಮಾಡಲಾಗಿತ್ತು. ಮೂರು ವರ್ಷ ಅವ ಧಿಯಲ್ಲಿ ಕೇವಲ 100 ರೂ. ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಿ ರೈತರ ಕೃಷಿ ಪಂಪ್‌ಸೆಟ್ ಗಳಿಗೆ ಮೀಟರ್ ಅಳವಡಿಸಿ ರೈತರಿಂದ ಬಳಕೆ ಆಧಾರದ ಮೇಲೆ ವಿದ್ಯುತ್ ಶುಲ್ಕ ವಸೂಲಿ ಮಾಡಲು ಹೊರಟಿರುವುದು ರೈತ ವಿರೋಧಿ ನೀತಿಯಾಗಿದೆ. ರಾಜ್ಯದಲ್ಲಿ 28 ಲಕ್ಷಕ್ಕೂ ಅಧಿಕ ಕೃಷಿ ಪಂಪ್‌ಸೆಟ್ ಬಳಕೆದಾರರಿದ್ದು, ಇದು ರೈತರಿಗೆ ಮಾರಕಾವಾಗುವುದರಿಂದ ಈ ತೀರ್ಮಾನವನ್ನು ಸರ್ಕಾರ ಕೈಬಿಡಲು ಮುಂದಾಗಬೇಕು. ಕೇಂದ್ರ ಸರ್ಕಾರದ ಸಲಹೆ ಮೇರೆಗೆ ರಾಜ್ಯ ಸರ್ಕಾರವು ಸುಗ್ರಿವಾಜ್ಞೆ ಮೂಲಕ ಭೂಸುಧಾರಣಾ ಕಾಯ್ದೆ ಜಾರಿಗೆ ತಂದಿರುವುದು ಖಂಡನೀಯ. ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಎಪಿಎಂಸಿಗಳಿಗೆ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಹಿಂಪಡೆಯದೇ ಹೋದರೆ ಸೆ. 21ರಂದು ಕುರುಬರ ಶಾಂತಕುಮಾರ ನೇತೃತ್ವದಲ್ಲಿ ಬೆಂಗಳೂರ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ವೀರನಗೌಡ ಪಾಟೀಲ ಹೇಳಿದರು.
ವಿಠಲ್ ಗಣಾಚಾರಿ, ಮಲ್ಲಿಕಾರ್ಜುನ ಹಣಜಿ, ಶರಣಪ್ಪ ಚೆನ್ನಳ್ಳಿ, ಈರಣ್ಣ ಕವಲೂರ, ವಿ.ಪಿ. ಪಾಟೀಲ, ಬಸವರಾಜ ಡಂಬಳಮಠ, ರಮೇಶ ಲಮಾಣಿ, ನಿಂಗಪ್ಪ ಹಡಗಲಿ, ವೀರಭದ್ರಪ್ಪ ಬೇವನವರ, ವೀರೂಪಾಕ್ಷಪ್ಪ ವಾಲಿಶೆಟ್ಟರ, ಎಚ್ .ಬಿ. ಚೂರಿ, ಶಿವಪುತ್ರಪ್ಪ ಕೊಪ್ಪಳ, ಗಂಗಾಧರ ತಳವಾರ, ಶಿವಾನಂದ ಅರವಟಗಿ, ರೇಣಪ್ಪ ಲಮಾಣಿ, ಶಿವಾಜಪ್ಪ ಆರೇರ ಇದ್ದರು.