ರಾಯಚೂರು: ಸ್ವತಃ ವೈದ್ಯರೂ ಆಗಿರುವ ನಗರ ಶಾಸಕ ಡಾ|ಶಿವರಾಜ್ ಪಾಟೀಲ್ ಕೊರೊನಾ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಜನರ ಜೀವ ರಕ್ಷಿಸುವ ಮಹತ್ತರ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸೋಂಕಿನಿಂದ ತಲ್ಲಣಿಸಿದ ಜನರ ಬೆನ್ನಿಗೆ ನಿಲ್ಲುವ ಮೂಲಕ ಕೊರೊನಾ ಮುಕ್ತ ಸಮಾಜಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಸೋಂಕು ತಡೆಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಆರಂಭದಿಂದಲೂ ಶ್ರಮಿಸುತ್ತಲೇ ಬಂದಿದ್ದ ಇವರು ಎರಡನೇ ಅಲೆ ಶುರುವಾಗುವ ಮುನ್ನವೇ ಹೋದಲೆಲ್ಲ ಎಚ್ಚರಿಕೆ ನೀಡಿದ್ದಾರೆ. ಸೋಂಕು ಹರಡದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.
ವೈದ್ಯಕೀಯ ಲೋಕದ ಆಗು ಹೋಗುಗಳ ಬಗ್ಗೆ ಸಾಕಷ್ಟು ತಿಳಿದುಕೊಂಡ ಡಾ|ಶಿವರಾಜ್ ಪಾಟೀಲ್ ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಮಾರ್ಗಸೂಚಿಗಳನ್ನು ಅಧಿ ಕಾರಿಗಳಿಗೆ ನೀಡುತ್ತಲೇ ಇದ್ದರು. ಇದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ಪ್ರಗತಿ ಪರಿಶೀಲನೆ ಸಭೆಗಳಲ್ಲೂ ಆರೋಗ್ಯ ಇಲಾಖೆ, ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೋಂಕಿನ ಇಂಚಿಂಚೂ ವಿವರಣೆ ನೀಡುತ್ತಿದ್ದರು.
ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾಕಷ್ಟು ಸಲಹೆ-ಸೂಚನೆ ನಿರ್ದೇಶನ ನೀಡುತ್ತಿದ್ದರು. ಈಗಲೂ ಅವರು ಸೋಂಕಿನ ವಿರುದ್ಧ ನಿರಂತರ ಸಮರ ನಡೆಸುತ್ತಲೇ ಇದ್ದಾರೆ. ನಗರಾದ್ಯಂತ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಮುಂದೆ ನಿಂತು ಎಲ್ಲೆಡೆ ಸ್ಯಾನಿಟೈಜೇಷನ್ ಮಾಡಿಸಲು ಒತ್ತು ನೀಡುತ್ತಿದ್ದಾರೆ.
ಎಲ್ಲ ವಾರ್ಡ್‌ಗಳಿಗೆ ತೆರಳಿ ಜನರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ. ಕೃಷಿ ವಿವಿ, ವಿವಿಧ ವಸತಿ ನಿಲಯ ಸೇರಿದಂತೆ ವಿವಿಧೆಡೆ ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭಿಸಿ ಮುಂಜಾಗ್ರತೆ ವಹಿಸಿದ್ದಾರೆ. ರಿಮ್ಸ್‌ನಲ್ಲಿ 20 ಬೆಡ್‌ಗಳ ಟ್ರಯಜ್ ಆರಂಭ, ಆಕ್ಸಿಜನ್ ಕೊರತೆ ನೀಗಿಸಲು ರಿಮ್ಸ್‌ನಲ್ಲೇ 20 ಕೆಎಲ್ ಸಾಮರ್ಥ್ಯದ ಘಟಕ ಸ್ಥಾಪನೆಗೆ ಒತ್ತು ನೀಡುವ ಮೂಲಕ ಪ್ರತಿ ಹಂತದಲ್ಲೂ ಎಚ್ಚರಿಕೆ ಹೆಜ್ಜೆಗಳನ್ನೇ ಇಡುತ್ತಿರುವುದು ವಿಶೇಷ.