Advertisement

ಸಕಲ ಸರ್ಕಾರಿ ಗೌರವಗಳೊಂದಿಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಂತ್ಯಕ್ರಿಯೆ

10:04 AM Mar 18, 2020 | sudhir |

ಹಾವೇರಿ: ಹಿರಿಯ ಪತ್ರಕರ್ತ, ಅಪ್ರತಿಮ ಹೋರಾಟಗಾರ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ರಾಣಿಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಮಂಗಳವಾರ ಸಂಜೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಶಿಷ್ಯರು, ಶ್ರೀಗಳು, ಗಣ್ಯರು, ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವ ವಂದನೆಯೊಂದಿಗೆ ನಡೆಯಿತು.

Advertisement

ಗ್ರಾಮದಲ್ಲಿರುವ ಪಾಪು ಅವರ ತೋಟದಲ್ಲಿ ಲಿಂಗಾಯತ ವಿಧಿವಿಧಾನದ ಪ್ರಕಾರ ಬಸವಣ್ಣನವರ ವಚನ ಪಠಣದ ಮೂಲಕ ಅಂತಿಮ ಕ್ರಿಯಾವಿಧಿ ನೆರವೇರಿಸಲಾಯಿತು. ಪಾಪು ಅವರ ಮಗ ಅಶೋಕ ಪಾಟೀಲ ಪೂಜಾ ಕಂಕೈರ್ಯ ನೆರವೇರಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಪಾಪು ಅವರ ಪಾರ್ಥೀವ ಶರೀರ ಅಂಬ್ಯುಲೆನ್ಸ್‌ನಲ್ಲಿ ಗ್ರಾಮಕ್ಕೆ ಬಂದಾಗ ಗ್ರಾಮದ ದೊಡ್ಡ ಜೆಟ್ಟಪ್ಪನವರ ಸಭಾಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ಗ್ರಾಮದಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ, ತೋಂಟದ ನಿಜಗುಣಾನಂದ ಸ್ವಾಮೀಜಿ ಇನ್ನಿತರ ಶ್ರೀಗಳು ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡರು.

ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ, ಮಾಜಿ ಸಚಿವ ಎಚ್.ಕೆ. ಪಾಟೀಲ, ಕೆ.ಬಿ. ಕೋಳಿವಾಡ, ಶಾಸಕ ಅರುಣಕುಮಾರ ಪೂಜಾರ, ಯು.ಬಿ. ಬಣಕಾರ, ಡಿ.ಆರ್. ಪಾಟೀಲ, ಬಿ.ಎಚ್. ಬನ್ನಿಕೋಡ, ರುದ್ರಪ್ಪ ಲಮಾಣಿ, ಐ.ಜಿ. ಸನದಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಸೇರಿದಂತೆ ಹಲವು ಗಣ್ಯರು, ಕುಟುಂಬ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯರು ಅಂತ್ಯಕ್ರಿಯೆ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next