ಬದಿಯಡ್ಕ: ಕನ್ನಡ ಪ್ರತಿಕೋದ್ಯಮದ ನಿರ್ಭೀತ, ಧೀಮಂತ ಪತ್ರಕರ್ತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪಾಪು ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ, ಶತಾಯುಷಿ, ಕನ್ನಡಿಗರು ಎಂದೂ ಮರೆಯದ ಕನ್ನಡ ಸಾರಸ್ವತ ಲೋಕದ ಕೊಂಡಿ ತನ್ನ 101ನೇ ವಯಸ್ಸಿನಲ್ಲಿ ಕಳಚಿಬಿದ್ದಿದೆ.
ನಾಡೋಜ ಪಾಟೀಲ ಪುಟ್ಟಪ್ಪ ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು ಹಲವಾರು ಕನ್ನಡ ಪರ ಹೋರಾಟಗಳಿಗೆ ನೇತƒತ್ವ ವಹಿಸಿದ್ದರು
ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ಕರ್ನಾಟಕದ ಕವಿ ಲೇಖಕರು, ನೀವು ನಗಬೇಕು, ಕನ್ನಡದ ಕಂಪು, ಸುವರ್ಣ ಕರ್ನಾಟಕ, ಪುಸ್ತಕ ಸಂಸ್ಕೃತಿ ಮೊದಲಾದ ಖ್ಯಾತ ಕೃತಿಗಳನ್ನು ನೀಡಿದ ಪುಟ್ಟಪ್ಪ ಅವರು ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ನƒಪತುಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದಿರುತ್ತಾರೆ.
ಕಾಸರಗೋಡಿನ ಕನ್ನಡಕ್ಕೆ ಸದಾ ಪ್ರೋತ್ಸಾಹವಾಗಿ ನಿಂತು ಕನ್ನಡ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದರು. ಕಯ್ಯಾರರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಪಾಪು ಅವರು ವಿದ್ಯಾವರ್ಧಕ ಸಂಘ ದಾರವಾಡದ ವತಿಯಿಂದ ನಾಡೋಜ ಕಯ್ಯಾರ ಕಿಂಞಣ್ಣ ರೈಯವರಿಗೆ ಕಾಸರಗೋಡಲ್ಲಿ ವಿಶೇಷ ಅಭಿನಂದನೆ-ಗೌರವ ಸಮ್ಮಾನ ಸಮಾರಂಭವನ್ನು ನಡೆಸಿ ಕಯ್ಯಾರರನ್ನು ಅಭಿನಂದಿಸಿದ್ದರು.
ಅಂದು ಇಬ್ಬರು ನಾಡೋಜರು ವೇದಿಕೆಯಲ್ಲಿ ವಿರಾಜಮಾನರಾಗಿರುವುದನ್ನು ನೋಡಿ ಕಾಸರಗೋಡಿನ ಕನ್ನಡಿಗರ ಮನ ತುಂಬಿಬಂದಿತ್ತು.
ರಾಜ್ಯಗಳೊಳಗಿನ ಭಾಷೆಯ ನಂಟನ್ನು, ಗಡಿನಾಡ ಕನ್ನಡಿಗರ ಮೇಲಿನ ಅವರ ಅಪಾರವಾದ ಪ್ರೀತಿ ಮತ್ತು ಗೌರವವನ್ನು ಸದಾ ತೋರುತ್ತಿದ್ದರು. ಪಾಪು ಅವರ ಅಗಲಿಕೆ ಕಾಸರಗೋಡಿನ ಕನ್ನಡಿಗರ ಮನಸನ್ನೂ ಭಾರವಾಗಿಸಿದೆ.