Advertisement

ಪಾಟೀಲ ಹಠಾವೋ-ರಂಗಾಯಣ ಬಚಾವೋ

11:25 AM Dec 16, 2018 | Team Udayavani |

ಕಲಬುರಗಿ: ರಂಗಾಯಣದ ನಿರ್ದೇಶಕ ಮಹೇಶ ಪಾಟೀಲ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಒತ್ತಾಯಿಸಿ ಶನಿವಾರ ಕಲಬುರಗಿ ರಂಗ ಒಕ್ಕೂಟದ ವತಿಯಿಂದ ರಂಗಾಯಣ ಎದುರು ರಂಗಕರ್ಮಿಗಳು ಪ್ರತಿಭಟನೆ ನಡೆಸಿದರು.

Advertisement

ಕಲಬುರಗಿ ರಂಗಾಯಣ ಆರಂಭವಾದಾಗಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಮಹೇಶ ಪಾಟೀಲರು ರಂಗಾಯಣದ ನಿರ್ದೇಶಕರಾದ ಮೇಲೆ ಒಂದೂವರೆ ವರ್ಷದಿಂದ ಯಾವುದೇ ರಂಗ ಚಟುವಟಿಕೆಗಳು ನಡೆಯದೆ ರಂಗಾಯಣಕ್ಕೆ ಗ್ರಹಣ ಹಿಡಿದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು, ಶಿವಮೊಗ್ಗ, ಧಾರವಾಡದ ರಂಗಾಯಣಗಳು ನಿರಂತರ ರಂಗ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿವೆ. ಕಲಬುರಗಿ ರಂಗಾಯಣ ಮಾತ್ರ ರೋಗಗ್ರಸ್ತವಾಗಿದೆ ಎಂದು “ಮಹೇಶ ಪಾಟೀಲ ಹಠಾವೋ, ರಂಗಾಯಣ ಬಚಾವೋ’ ಘೋಷಣೆ ಕೂಗಿದರು.

ಈ ಭಾಗದ ಹಿರಿಯ ಕಲಾವಿದರು, ರಂಗಕರ್ಮಿಗಳ ಹೋರಾಟದ ಫಲವಾಗಿ ರಂಗಾಯಣ ಸ್ಥಾಪನೆಯಾಗಿದೆ. ಆದರೆ, ರಂಗಾಯಣದ ಯಾವುದೇ ಕಾರ್ಯ ಚಟುವಟಿಕೆ ನಡೆಸದೆ ಮಹೇಶ ಪಾಟೀಲ ಐಷಾರಾಮಿ ಜೀವನ ನಡೆಸುತ್ತಾ ಕಾಲ ಕಳೆಯುತ್ತಿದ್ದಾರೆ. ಇಂದರಿಂದ ಸಾರ್ವಜನಿಕರ ಲಕ್ಷಾಂತರ ರೂ. ತೆರಿಗೆ ಹಣ ವ್ಯರ್ಥ್ಯವಾಗುತ್ತಿದೆ. ರಂಗಾಯಣದ ದುಸ್ಥಿತಿ ಕಂಡು ಈ ಭಾಗದ ರಂಗಕರ್ಮಿಗಳು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು.

ರಂಗಾಯಣದ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಹಾಗೂ ನಿರ್ದೇಶಕರನ್ನು ವಜಾಗೊಳಿಸಬೇಕೆಂದು ಜಿಲ್ಲಾಡಳಿತ ಮತ್ತು ರಂಗ ಸಮಾಜದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಸಿ ನಾಲ್ಕು ತಿಂಗಳು ಕಳೆಯುತ್ತಿದೆ. ಆದರೆ, ಮಹೇಶ ಪಾಟೀಲರನ್ನುವಜಾಗೊಳಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಸಾಂಸ್ಕೃತಿಕ ಲೋಕಕ್ಕೆ ಹೊಡೆತ ಬಿದ್ದಿದ್ದು, ರಂಗಾಯಣದ ಪ್ರಯೋಜನವೇ ಇಲ್ಲದಂತಾಗಿದೆ ಎಂದು ದೂರಿದರು.

Advertisement

ರಂಗಾಯಣವನ್ನು ರಕ್ಷಿಸಲು ನಿರ್ದೇಶಕ ಮಹೇಶ ಪಾಟೀಲರನ್ನು ವಜಾಗೊಳಿಸಬೇಕು. ರಂಗ ಚಟುವಟಿಕೆಗಳನ್ನು ಆರಂಭಿಸುವ ಮೂಲಕ ರಂಗಾಯಣಕ್ಕೆ ಪುನಃಶ್ಚೇತನ ನೀಡಬೇಕು. ಇಲ್ಲವಾದಲ್ಲಿ ಬೆಳಗಾವಿಯ ಸುವರ್ಣ ಸೌಧದ ಎದುರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಗಳ
ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಇದಕ್ಕೂ ಮುನ್ನ ಖರ್ಗೆ ಪೆಟ್ರೋಲ್‌ ಪಂಪ್‌ನಿಂದ ರಂಗಾಯಣ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕಲಬುರಗಿ ರಂಗ ಒಕ್ಕೂಟ ಅಧ್ಯಕ್ಷ ಹಾಗೂ ಪತ್ರಕರ್ತ ಪಿ.ಎಂ.ಮಣ್ಣೂರ, ಜನರಂಗ ಅಧ್ಯಕ್ಷ ಶಂಕರಯ್ಯ ಘಂಟಿ, ವಿ.ಎನ್‌. ಅಕ್ಕಿ, ಸುನೀಲ ಮಾನ್ಪಡೆ, ಕಲ್ಯಾಣ ಭಜಂತ್ರಿ, ವಿಜಯ ಹಾಗರಗುಂಡಗಿ, ಸುರೇಶ ಬಡಿಗೇರ, ಅಶೋಕ ಚಿತ್ತಕೋಟಿ, ಶಾಂತವೀರ ಮಠಪತಿ ಮುಂತಾದವರು ಪಾಲ್ಗೊಂಡಿದ್ದರು.

ಕಲಬುರಗಿ ರಂಗಾಯಣ ಆರಂಭದಿಂದಲೂ ಗೊಂದಲದಲ್ಲಿಯೇ ಸಿಲುಕಿದ್ದು, ಈ ಭಾಗದ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ನಿರ್ದೇಶಕ ಮಹೇಶ ಪಾಟೀಲರ ದುರಾಡಳಿತ ಬಗ್ಗೆ ಸಚಿವೆ ಜಯಮಾಲಾಗೆ ವರದಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮಕೈಗೊಳ್ಳದೆ ಇರುವುದು ಖಂಡನೀಯ.
 ಪಿ.ಎಂ. ಮಣ್ಣೂರ, ಅಧ್ಯಕ್ಷರು, ಕಲಬುರಗಿ ರಂಗ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next