Advertisement

ಪಾಟೀಲ್ ಗೆ ಮತ್ತೇ ಮಂತ್ರಿ ಪಟ್ಟ

12:42 PM Aug 21, 2019 | Team Udayavani |

ನರಗುಂದ: ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಸಿ.ಸಿ. ಪಾಟೀಲ ರಾಜ್ಯ ಸರಕಾರದ ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿ ಪಥದ ನಿರೀಕ್ಷೆಗಳು ಗರಿಗೆದರಿವೆ.

Advertisement

2004ರಿಂದ 2013ರ ವರೆಗೆ ಶಾಸಕರಾಗಿ, ಸಚಿವರಾಗಿ ಅಲ್ಪ ಅವಧಿಯಲ್ಲೇ ರಾಜಕೀಯ ರಂಗದಲ್ಲಿ ಒಂದೊಂದೆ ಮೆಟ್ಟಿಲೇರಿದ ಇವರು 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಇವರು ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಆಚಮಟ್ಟಿ ಒಕ್ಕಲುತನ ಕುಟುಂಬ ಹಿನ್ನೆಲೆ ಹೊಂದಿದ್ದು, ಬೆಳಗಾವಿ ಜಿಪಂ ಸದಸ್ಯರಾಗಿ, 1995ರಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಸವದತ್ತಿ ಮಲಪ್ರಭಾ ಸಹಕಾರಿ ನೂಲಿನ ಗಿರಣಿ ಚೇರಮನ್ನರಾಗಿ, ನವಲಗುಂದ ರೇಣುಕಾದೇವಿ ಗೋವಿನಜೋಳ ಸಂರಕ್ಷಣಾ ಘಟಕದ ಸ್ಥಾಪಕ ನಿರ್ದೇಶಕರಾಗಿ, ಸಧ್ಯ ಲಯನ್ಸ್‌ ಶಿಕ್ಷಣ ಸಂಸ್ಥೆ ಚೇರಮನ್ನರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮತಕ್ಷೇತ್ರದ ರಾಜಕಾರಣದಲ್ಲಿ ಅಡಿಯಿಟ್ಟ ಸಿ.ಸಿ. ಪಾಟೀಲ್ ಪ್ರಥಮವಾಗಿ 1999ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಬಿ.ಆರ್‌. ಯಾವಗಲ್ಲ ಎದುರು ಪರಾಭವಗೊಂಡರೂ ಕುಗ್ಗದೇ ಸವಾಲಾಗಿ ಸ್ವೀಕರಿಸಿ 2004ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಗೆಲುವಿನ ಮುಕುಟ ಧರಿಸಿದರು.

ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಜಕೀಯ ಉತ್ತುಂಗಕ್ಕೇರಿದವರು ಪಾಟೀಲ್.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಾರ್ವತ್ರಿಕಗೊಳಿಸಿ ಭಾಗ್ಯಲಕ್ಷ್ಮೀಬಾಂಡ್‌, ಬಾಲ ಸಂಜೀವಿನಿ ಯೋಜನೆ, ಭಾಗ್ಯಲಕ್ಷ್ಮೀ ತಾಯಂದಿರಿಗೆ ಸೀರೆ, ಅಂಗನವಾಡಿ ಕೇಂದ್ರಗಳಲ್ಲಿ ಪ್ರಥಮವಾಗಿ ಪ್ರಾದೇಶಿಕವಾರು ಆಹಾರ ಪದ್ಧತಿಗೆ ಚಾಲನೆ ನೀಡಿದ್ದು ಸ್ಮರಣೀಯ.

ಕಳಸಾ ಬಂಡೂರಿ ಯೋಜನೆಗೆ ಒತ್ತಾಯಿಸಿ ಹೋರಾಟಕ್ಕಿಳಿದು ಪಕ್ಷಾತೀತವಾಗಿ ರೈತರೊಂದಿಗೆ 2005ರಲ್ಲಿ ಸುದೀರ್ಘ‌ 69 ದಿನಗಳ ಸರದಿ ಉಪವಾಸ ಸತ್ಯಾಗ್ರಹ ನಡೆಸಿ ರಾಜ್ಯದ ಗಮನ ಸೆಳೆದಿದ್ದರು.

ಗುಂಡೇಟಿನ ಪುನರ್ಜನ್ಮ: ಮತಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದು 2013 ಮಾ. 17ರಂದು ಮತಕ್ಷೇತ್ರದ ರೋಣ ತಾಲೂಕು ಮೆಣಸಗಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಹೋದ ಸಂದರ್ಭದಲ್ಲಿ ಅಂಗರಕ್ಷಕನ ಪಿಸ್ತೂಲಿನ ಗುಂಡೇಟಿಗೆ ಗಾಯಗೊಂಡು ದೀರ್ಘ‌ಕಾಲ ಚಿಕಿತ್ಸೆ ಬಳಿಕ ಮತ್ತೇ ಫಿನಿಕ್ಸ್‌ನಂತೆ ಪುನರ್ಜನ್ಮ ಪಡೆದಿದ್ದು ದೈವಲೀಲೆಯೇ ಸರಿ.

 

•ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next