ಮಾತು ಮಾತಿಗೂ ತಾಳ್ಮೆ ಕೆಟ್ಟು ಸಿಟ್ಟಿನಿಂದ ವರ್ತಿಸಿ ಮನೆಯ ವರೊಡನೆ ಜಗಳವಾಡಿ ಕಂಡ ಕಂಡ ವಸ್ತುಗಳನ್ನೆಲ್ಲ ಅಲ್ಲಲ್ಲಿ ಎಸೆಯುತ್ತಿದ್ದ ಮಗನಿಗೆ ತಂದೆ ತಾಳ್ಮೆಯಿಂದ ಕಬ್ಬಿಣದ ಮೊಳೆ ತುಂಬಿದ ಚೀಲವೊಂದನ್ನು ಕೊಟ್ಟು ಸಿಟ್ಟು ಬಂದಾಗಲೆಲ್ಲ ಅದನ್ನು ಮನೆಯ ಹಿಂಭಾಗದ ಗೋಡೆಗೆ ಒಂದೊಂದನ್ನೇ ಹೊಡೆಯಲು ಹೇಳಿದ.
ಬಾಲಕ ಮರುದಿನದಿಂದಲೇ ತಂದೆಯ ಸಲಹೆಯನ್ನು ಅನುಸರಿಸಿದ. ಸಿಟ್ಟು ಬಂದಾ ಗಲೆಲ್ಲ ತನ್ನವರೊಂದಿಗೆ ಕಿರುಚಾಡು ವು ದನ್ನು ಬಿಟ್ಟು ಗೋಡೆಯ ಬಳಿ ಹೋಗಿ ಮೊಳೆ ಹೊಡೆಯಲು ಆರಂಭಿಸಿದ. ಮೊದಲ ದಿನ ಇಪ್ಪತ್ತು ಆಣಿಗಳನ್ನು ಗೋಡೆಯಲ್ಲಿ ಹೊಡೆದು ಬಂದ. ಮಾರನೆಯ ದಿನ ಹದಿನೆಂಟು, ಮತ್ತೆ ಹದಿನಾರು.. ಹೀಗೆ ದಿನ ಹೋದಂತೆಲ್ಲ ಗೋಡೆಗೆ ಹೊಡೆಯುವ ಆಣಿಗಳ ಸಂಖ್ಯೆ ಕಡಿಮೆಯಾಗುತ್ತ ಬಂತು. ಗಟ್ಟಿಯಾದ ಗೋಡೆಯಲ್ಲಿ ಕಬ್ಬಿಣದ ಆಣಿಗಳನ್ನು ಹೊಡೆದು ಕೂರಿಸುವ ಕಷ್ಟಕ್ಕಿಂತ ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದೇ ಸುಲಭ ಅಂತ ಬಾಲಕನಿಗೆ ಅನಿಸಿಬಿಟ್ಟಿತು. ಈ ಕಷ್ಟದ ಕೆಲಸದಿಂದ ತಪ್ಪಿಸಿಕೊಳ್ಳುವ ನಿರ್ಧಾರ ಮಾಡಿ ಸಿಟ್ಟನ್ನು ನಿಯಂತ್ರಿಸತೊಡಗಿದ. ಕ್ರಮೇಣ ಸಿಟ್ಟು ಕಡಿಮೆಯಾಗಿ ಗೋಡೆಯಲ್ಲಿ ಒಂದು ಮೊಳೆಯನ್ನೂ ಹೊಡೆಯದ ದಿನವೊಂದು ಬಂದು ಬಿಟ್ಟಿತು. ಖುಷಿಯಿಂದ ತಂದೆಯ ಬಳಿ ಬಂದು ಇದನ್ನು ತಿಳಿಸಿದ.
ಪ್ರೀತಿಯಿಂದ ತಂದೆ ಮತ್ತೆ ಹೇಳಿದ, ಇನ್ನೂ ಕೆಲವು ಕಾಲ ಈ ಸಿಟ್ಟನ್ನು ನಿಯಂತ್ರ ಣದಲ್ಲಿ ಇರಿಸಿಕೊಳ್ಳಲು ಆ ಮೊಳೆಗಳನ್ನೆಲ್ಲ ನಿಧಾನವಾಗಿ ದಿನಕ್ಕೊಂದರಂತೆ ಜಾಗರೂ ಕತೆಯಿಂದ ತೆಗೆದು ಬಿಡು ಅಂತ. ಸಹನೆ ಯಿಂದ ಮಗ ಅದನ್ನೆಲ್ಲ ತೆಗೆಯಲು ಆರಂಭಿಸಿದ. ಗೋಡೆಯಲ್ಲಿ ಇದ್ದ ಮೊಳೆ ಯೆಲ್ಲ ಖಾಲಿಯಾಯಿತು. ಮತ್ತೆ ತಂದೆ ಯ ಬಳಿ ತೆರಳಿ ಈ ವಿಷಯ ತಿಳಿಸಿದ.
ಮಗನನ್ನು ತಂದೆ ಗೋಡೆಯ ಬಳಿ ಕರೆದು “ಒಳ್ಳೆಯ ಕೆಲಸವನ್ನೇ ಮಾಡಿದೆ ಮಗೂ. ಆದರೆ ಅಲ್ಲಿ ಉಳಿದ ಕಲೆಗಳನ್ನು ತೋರಿಸುತ್ತ ಗೋಡೆ ಮತ್ತೆ ಮೊದಲಿನ ಹಾಗೆಯೇ ಉಳಿದಿಲ್ಲ ನೋಡು’ ಎಂದ. ತೂತಿನಿಂದಾದ ಕಲೆಗಳು ಗೋಡೆಯನ್ನು ಹಾಳು ಮಾಡಿ ಬಿಟ್ಟಿವೆ.ಆ ಕಲೆಗಳು ತತ್‌ಕ್ಷಣ ಮಾಸಿ ಹೋಗಿಲ್ಲ. ಹಾಗೆಯೇ ಸಿಟ್ಟಿನಿಂದ ಆಡಿದ ಮಾತುಗಳು ಎಷ್ಟೇ ಕ್ಷಮೆ ಕೇಳಿದರೂ ಮನದಿಂದ ಮಾಸಿಹೋಗದು. ಅವುಗಳು ಸಣ್ಣದೊಂದು ಕಹಿಯನ್ನು ಉಳಿಸಿಯೇ ಬಿಡುತ್ತದೆ. ಆದುದರಿಂದ ತಾಳ್ಮೆ ಕಳೆದುಕೊಂಡು ಸಿಟ್ಟಿನ ಭರದಲ್ಲಿ ಮಾತನಾಡುವ ಮೊದಲು ಅದರ ಪರಿ ಣಾಮವನ್ನು ಯೋಚಿಸಬೇಕು. ರಕ್ತ ಬರುವಂತೆ ಚೂರಿಯಿಂದ ಚುಚ್ಚಿದ ಗಾಯ ಮಾಸಿ ಹೋದರೂ ಗಾಯದ ಕಲೆ ಮಾತ್ರ ಉಳಿದೇ ಬಿಡುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಣದಲ್ಲಿ ಇರಿಸಿ ಕೊಳ್ಳಲು ಪ್ರಯತ್ನಿಸಬೇಕು’ ಎಂದ.
ಈ ಕಥೆ ಆ ಬಾಲಕನಿಗೆ ಮಾತ್ರವಲ್ಲ, ನಮ್ಮೆಲ್ಲರ ಬದುಕಿಗೂ ಅನ್ವಯಿಸುತ್ತದೆ ಅಲ್ಲವೆ? ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ನಿಯಂತ್ರಣ ತಪ್ಪಿ ಬರುವ ಮಾತುಗಳು ಅಚ್ಚಳಿ ಯದ ನೋವನ್ನು ಉಳಿಸಿ ಹೋಗುತ್ತದೆ. ಅದೆಷ್ಟೋ ಬಾರಿ ಸಣ್ಣ ಪುಟ್ಟ ಮುಳ್ಳನ್ನು ತೆಗೆಯಲು ಬಟ್ಟೆ ಹೊಲಿಯುವ ಸೂಜಿಯ ಬದಲು ಗೋಣಿ ಹೊಲಿಯುವ ದಬ್ಬಣವನ್ನೇ ಉಪಯೋಗಿಸುತ್ತೇವೆ. ಮುಳ್ಳು ಹೋಗುವ ಬದಲು ಅದು ಒಂದಿಷ್ಟು ಗಾಯವನ್ನು ಉಂಟು ಮಾಡಬಹುದೆಂಬ ಅಪಾಯವನ್ನು ಮರೆತು ಬಿಡುತ್ತೇವೆ. ಸಿಟ್ಟಿನಲ್ಲಿ ಕಿರುಚಾಡುತ್ತೇವೆ. ಮಾತು, ಕೃತಿ ಎರಡೂ ನಿಯಂತ್ರಣ ತಪ್ಪುತ್ತದೆ. ಅನಾಹುತವಾಗುತ್ತದೆ.
ಬದುಕು ಸುಂದರವಾಗಿರಬೇಕೆಂದರೆ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸ ಬೇಕು. ಸಿಟ್ಟಿನಲ್ಲಿರುವಾಗ ಯಾವ ಮಾತುಗಳನ್ನೂ ಆಡದೆ ಆದಷ್ಟು ಸುಮ್ಮನಿ ರಬೇಕು. ಆಡಿದ ಮಾತನ್ನು ಮರಳಿ ಪಡೆಯಲಾಗದು. ಗೋಡೆಯಲ್ಲಿ ಕಲೆಗಳು ಉಳಿದುಬಿಟ್ಟ ಹಾಗೆ ಸಿಟ್ಟಿನಿಂದ ಹೊರಬಿದ್ದ ಮಾತುಗಳು ಮನದ ಗೋಡೆಯಲ್ಲಿ ಕಲೆಗಳಾಗಿ ಅಚ್ಚೊತ್ತಿ ಬಿಡಬಹುದು. ಸಿಟ್ಟನ್ನು ತಣ್ಣಗಾಗಿಸುವ ದಾರಿ ಹುಡುಕಿ ಪ್ರಶಾಂತವಾಗಿರಲು ಕಲಿಯೋಣ.
– ವಿದ್ಯಾ ಅಮ್ಮಣ್ಣಾಯ, ಕಾಪು